ಮಡಿಕೇರಿ, ಅ. 23: ಕಾವೇರಿ ತಾಲೂಕು ರಚನೆಗಾಗಿ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಕಾವೇರಿ ತಾಲೂಕು ಹೋರಾಟ ಸಮಿತಿಯ ಪ್ರಮುಖರು ಇಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರುಗಳನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಿದರು.ಮುಂದಿನ ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವದೆಂದು ತಿಳಿಸಿರುವ ಹೋರಾಟದ ಕೇಂದ್ರ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ತಾ. 30 ರಂದು ಕುಶಾಲಗರದಲ್ಲಿ ಬೃಹತ್ ಸಮಾವೇಶ ನಡೆಸಲಾಗುವದು ಅಲ್ಲದೆ, ಸಮಾವೇಶದ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕುಶಾಲನಗರ ಬಂದ್‍ಗೆ ಕರೆ ನೀಡಲಾಗುವದೆಂದು ತಿಳಿಸಿದ್ದಾರೆ.

ತಾಲೂಕು ರಚನೆಯ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜ್ಯ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಸಚಿವರಾದ ಎ.ಮಂಜು ಸೇರಿದಂತೆ ಅನೇಕ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೋರಾಟ ಸಮಿತಿಯ ನಿಯೋಗ ಭೇಟಿಯಾದ ಸಂದರ್ಭ ಸಚಿವರುಗಳು ಹಾಗೂ ಮುಖಂಡರು ತಾಲೂಕು ರಚನೆಯ ಬೇಡಿಕೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಮುಖ್ಯಮಂತ್ರಿಗಳ ಗಮನ ಸೆಳೆಯುವ ಭರವಸೆ ನೀಡಿದ್ದಾರೆ ಎಂದು ವಿ.ಪಿ. ಶಶಿಧರ್ ಮಾಹಿತಿ ನೀಡಿದ್ದಾರೆ.

ನಿಯೋಗದಲ್ಲಿ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್, ಹೋರಾಟ ಸಮಿತಿಯ ಪದಾಧಿಕಾರಿಗಳಾದ ಆರ್.ಕೆ. ನಾಗೇಂದ್ರ ಬಾಬು, ನರಸಿಂಹ ಮೂರ್ತಿ, ಅಬ್ದುಲ್ ಖಾದರ್, ಶೈಲೇಶ್, ಪ.ಪಂ. ಉಪಾಧ್ಯಕ್ಷ ಶರವಣ ಕುಮಾರ್ ಮತ್ತಿತರ ಪ್ರಮುಖರು ಹಾಜರಿದ್ದರು.