ಮಡಿಕೇರಿ, ಅ. 22: ಭಾರತ ದೇಶದ ರಕ್ಷಣಾ ಪಡೆಯನ್ನು ಇಡೀ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಇಬ್ಬರು ಧೀಮಂತ ವ್ಯಕ್ತಿಗಳು ಕಾವೇರಿ ತವರು ಕೊಡಗಿನವರು. ದೇಶದಲ್ಲಿ ಒಂದೇ ಜಿಲ್ಲೆಯಿಂದ ಈ ತನಕ ಇಬ್ಬರು ಸೇನಾನಿಗಳು ಜನರಲ್‍ಗಳಾದ ನಿದರ್ಶನಗಳಿಲ್ಲ. ಅದರಲ್ಲೂ ಸ್ವಾತಂತ್ರ್ಯಾನಂತರ ರಕ್ಷಣಾ ಪಡೆಯ ಮೂರು ವಿಭಾಗಗಳ (ಭೂಪಡೆ, ವಾಯುಪಡೆ, ನೌಕಾಪಡೆ) ಏಕೈಕ ಮಹಾದಂಡ ನಾಯಕರಾಗಿ ಕಾರ್ಯನಿರ್ವಹಿಸಿದವರು ಒಬ್ಬರಾದರೆ ಇವರ ನಂತರ ಭೂಸೇನೆಯ ಜನರಲ್ ಆಗಿ ಕಾರ್ಯನಿರ್ವಹಿಸಿದವರು ಮತ್ತೊಬ್ಬರು. ಇವರಿಬ್ಬರು ಕೊಡಗಿನವರು ಎಂಬದು ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಒಂದು ಪ್ರತಿಷ್ಠೆಯಾಗಿದೆ.ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಈ ಕೀರ್ತಿಶಾಲಿಗಳು. ಇಬರಿಬ್ಬರು ಮಹಾನ್ ನಾಯಕರ ಪ್ರತಿಮೆ, ಇವರ ಹೆಸರಿನ ರಸ್ತೆ ಮತ್ತಿತರ ಅನೇಕ ವಿಚಾರಗಳು ಇದ್ದರೂ ಒಂದೇ ಕಡೆಯಲ್ಲಿ ಇಬ್ಬರು ಜನರಲ್‍ಗಳ ಪ್ರತಿಮೆ ಇಲ್ಲ. ಇದೀಗ ದೇಶದಲ್ಲೇ ಪ್ರಥಮವೆಂಬಂತೆ ದಕ್ಷಿಣ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ಇಬ್ಬರು ಕೀರ್ತಿಶಾಲಿಗಳ ಪ್ರತಿಮೆ ಒಂದೆಡೆಯಲ್ಲಿ ಸ್ಥಾಪನೆಗೊಳ್ಳಲಿದೆ. ಈ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದ್ದು, ನವೆಂಬರ್ ಮೊದಲ ವಾರದಲ್ಲಿ ದೇಶದ ಭೂ ಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರು ಉದ್ಘಾಟನೆಗಾಗಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಬಹುತೇಕ ನವೆಂಬರ್ 4 ರಂದು ಕಾರ್ಯಕ್ರಮ ನಿಗದಿಯಾಗಿದೆ. ಆದರೆ ಉದ್ಘಾಟಕರು ಸೇನಾ ಮುಖ್ಯಸ್ಥರಾಗಿರುವದರಿಂದ ಈ ದಿನ ಬದಲಾದರೂ ನವಂಬರ್ ಮೊದಲ ವಾರದಲ್ಲೇ ಪ್ರತಿಮೆ ಅನಾವರಣಗೊಳ್ಳಲಿದೆ.

ಸೇನಾ ಮುಖ್ಯಸ್ಥರ ಭೇಟಿಯ ಹಿನ್ನೆಲೆಯಲ್ಲಿ ಈಗಾಗಲೇ ಸೇನಾ ಸಿಬ್ಬಂದಿಗಳು ಗೋಣಿಕೊಪ್ಪಲುವಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿ ತೆರಳಿದ್ದಾರೆ. ಎಂಇಜಿ ಹಾಗೂ ಕ್ಯಾಂಪ್ ಆಫ್ ಮಿಲಿಟರಿ ಪೊಲೀಸ್ ತಂಡ ಸರ್ವೆ ಕಾರ್ಯ ನಡೆಸಿದೆ.

ಪ್ರತಿಮೆ ಹೀಗಿರಲಿದೆ

ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ವಿದ್ಯಾಸಂಸ್ಥೆ ಪ್ರತಿಮೆ ಅಳವಡಿಸಲು ಜಾಗ ನೀಡಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ಪ್ರತಿಮೆ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಿದೆ. ಸುಮಾರು ರೂ. 32 ಲಕ್ಷ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ.

7 ಅಡಿ 6 ಇಂಚು ಎತ್ತರದ ಕಂಚಿನ ಪ್ರತಿಮೆ ಇದಾಗಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆ ಒಂದು ಹೆಜ್ಜೆ ಮುಂದಿರಲಿದ್ದು, ಅದರ ಹಿಂದೆ ಒಟ್ಟಿನಲ್ಲಿಯೇ ಜನರಲ್ ತಿಮ್ಮಯ್ಯ ಪ್ರತಿಮೆ ಇರುತ್ತದೆ. ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಈ ಪ್ರಯತ್ನಕ್ಕೆ ಭಾರತೀಯ ಸೇನೆಯಿಂದಲೂ ಸಹಕಾರ ದೊರೆತಿದೆ. ಕಾವೇರಿ ಕಾಲೇಜು ವಿದ್ಯಾಸಂಸ್ಥೆ ಜಾಗ ನೀಡಿದ್ದರೆ ಇನ್ನೂ ಅನೇಕ ದಾನಿಗಳು ಹಾಗೂ ಫೋರಂ ಪದಾಧಿಕಾರಿಗಳು ನೆರವು ನೀಡಿದ್ದಾರೆ.

ಸೇನಾ ಪ್ರಮುಖರ ಸ್ಪಂದನ

ಈ ಹಿಂದೆ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನಿಂದ ದೆಹಲಿಯ ಪೆರೇಡ್ ಮೈದಾನಕ್ಕೆ ಫೀ.ಮಾ. ಕಾರ್ಯಪ್ಪ ಅವರ ಹೆಸರು ಇಡುವಂತೆ ಮನವಿ ಮಾಡಲಾಗಿತ್ತು. ಕಳೆದ ವರ್ಷ ಜಿಲ್ಲೆಗೆ ಭೇಟಿ ನೀಡಿದ್ದ ಭೂ ಸೇನಾ ಮುಖ್ಯಸ್ಥರಾದ ದಲ್ಬೀರ್ ಸಿಂಗ್ ಸುಹಾಗ್ ಅವರ ಗಮನ ವನ್ನೂ ಈ ಬಗ್ಗೆ ಸೆಳೆಯಲಾಗಿದ್ದು, ಅವರು ಖಚಿತ ಭರವಸೆ ನೀಡಿದ್ದರು. ಇವರು ನಿವೃತ್ತಿಯಾಗುವ ಒಂದು ದಿನ ಮುಂಚೆ ದೆಹಲಿಯ ಪೆರೇಡ್ ಮೈದಾನಕ್ಕೆ ಕಾರ್ಯಪ್ಪ ಹೆಸರು ಅಧಿಕೃತಗೊಳಿಸಿದ್ದು ಮಾತ್ರವಲ್ಲದೆ, ಇಲ್ಲಿ 9 ಅಡಿ

(ಮೊದಲ ಪುಟದಿಂದ) ಎತ್ತರದ ಕಾರ್ಯಪ್ಪ ಅವರ ಪ್ರತಿಮೆಯನ್ನೂ ಅಳವಡಿಸಲಾಗಿದೆ. ಇದು ಈ ವೀರ ಸೇನಾನಿಗಳ ಬಗ್ಗೆ ಇರುವ ಅಭಿಮಾನ ಎಂದು ಫೋರಂನ ಸಂಚಾಲಕ ಮೇಜರ್ ನಂದಾ ನಂಜಪ್ಪ ಅವರು ‘ಶಕ್ತಿ’ ಯೊಂದಿಗೆ ಹೆಮ್ಮೆ ವ್ಯಕ್ತಪಡಿಸಿದರು. ಇದೀಗ ಜಿಲ್ಲೆಯಲ್ಲಿ ಇಬ್ಬರ ಪ್ರತಿಮೆ ಅನಾವರಣಕ್ಕೆ ಭೂ ಸೇನಾ ಮುಖ್ಯಸ್ಥರೇ ಭೇಟಿ ನೀಡುತ್ತಿರುವದು ಪ್ರತಿಷ್ಠೆಯ ವಿಚಾರವಾಗಿದೆ.

ಕಾರ್ಯಕ್ರಮದ ಕುರಿತು ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ, ಸಂಚಾಲಕ ಮೇಜರ್ ನಂಜಪ್ಪ ಹಾಗೂ ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಅವರುಗಳು ‘ಶಕ್ತಿ’ಗೆ ಮಾಹಿತಿ ನೀಡಿದರು. ನಿಗದಿತ ದಿನದಂದು ಬೆಳಿಗ್ಗೆ ಸುಮಾರು ಒಂದು ಗಂಟೆ 15 ನಿಮಿಷದ ಕಾರ್ಯಕ್ರಮ ನಡೆಯಲಿದೆ. ದೆಹಲಿಯಿಂದ ಸೇನಾ ಹೆಲಿಕಾಪ್ಟರ್‍ನಲ್ಲಿ ಆಗಮಿಸಲಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರತಿಮೆ ಅನಾವರಣಗೊಳಿಸಿ ಯುವ ಜನತೆಗೆ ಸಂದೇಶ ನೀಡಲಿ ದ್ದಾರೆ. ಈ ಸಂದರ್ಭ ಜೀವಮಾನ ಸಾಧನೆಗೆ ಫೋರಂನಿಂದ ನೀಡುವ ಚಿನ್ನದ ಪದಕ ಪ್ರದಾನವೂ ನಡೆಯಲಿದೆ.

ನಿವೃತ್ತ ಸೇನಾಧಿಕಾರಿಗಳು, ಮಾಜಿಯೋಧರು, ದಾನಿಗಳೊಂದಿಗೆ ಮಾತುಕತೆ ನಡೆಸಲಿರುವ ಬಿಪಿನ್ ರಾವತ್ ಅವರು ಬಳಿಕ ನೇರವಾಗಿ ದೆಹಲಿಗೆ ಹಿಂತಿರುಗಲಿದ್ದಾರೆ. ಇವರೊಂದಿಗೆ ಸೇನೆಯ ಇನ್ನಷ್ಟು ಉನ್ನತಾಧಿಕಾರಿಗಳು ಭೇಟಿ ನೀಡಲಿದ್ದಾರೆ. ಜಿಲ್ಲೆಯ ನಿವೃತ್ತ ಹಿರಿಯ ಸೇನಾಧಿಕಾರಿಗಳು, ಮಾಜಿ ಯೋಧರು, ವೀರ ಚಕ್ರ ಸೇರಿದಂತೆ ವಿವಿಧ ಬಿರುದುಗಳನ್ನು ಪಡೆದಿರುವ ಯೋಧರು, ಸಾರ್ವಜನಿಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ. ಸೇನಾ ಬ್ಯಾಂಡ್ ಸೇರಿದಂತೆ ಶಿಸ್ತು ಬದ್ಧವಾದ ಕಾರ್ಯಕ್ರಮದೊಂದಿಗೆ ಪ್ರತಿಮೆ ಅನಾವರಣಗೊಳ್ಳಲಿದೆ ಎಂದು ಅವರುಗಳು ವಿವರವಿತ್ತರು.