ಭಾಗಮಂಡಲ, ಅ. 22: ನದಿ ತೀರಗಳು ಸಂಸ್ಕøತಿಯ ಉಗಮ ಸ್ಥಾನವಾಗಿದ್ದು ತಟಗಳಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಬಗ್ಗೆ ನಿಗಾವಹಿಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ವಿಶ್ವ ಹಿಂದು ಪರಿಷತ್‍ನ ರಾಷ್ಟ್ರೀಯ ಕಾರ್ಯದರ್ಶಿ ಮಿಳಿಂದ್ ಪರಾಂತೆ ತಿಳಿಸಿದ್ದಾರೆ. ಅಖಿಲ ಭಾರತೀಯ ಸನ್ಯಾಸಿ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ತಲಕಾವೇರಿಯಲ್ಲಿ 7ನೇ ವರ್ಷದ ಕಾವೇರಿ ಜಾಗೃತಿ ಯಾತ್ರೆಗೆ ಚಾಲನೆ ನೀಡಿದ ಅವರು, ನದಿಯನ್ನು ತಾಯಿಯಂತೆ ಪೂಜಿಸಬೇಕು. ಅಭಿವೃದ್ಧಿಯ ನಡುವೆ ನೀರಿನ ಮಹತ್ವ ಅರಿಯುವದರೊಂದಿಗೆ ಯಾವದೇ ಸಂದರ್ಭ ದುರುಪಯೋಗ ಆಗದಂತೆ ಎಚ್ಚರವಹಿಸಬೇಕು. ಮುಂದಿನ ಪೀಳಿಗೆಗೆ ಪ್ರಾಕೃತಿಕ ಸಂಪತ್ತನ್ನು ಹಸ್ತಾಂತರಿಸುವದು ಎಲ್ಲರ ಕರ್ತವ್ಯವಾಗಿದೆ ಎಂದರು. ಕಾವೇರಿ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಮಾಡುತ್ತಿರುವ ಹೋರಾಟಕ್ಕೆ ವಿಶ್ವ ಹಿಂದು ಪರಿಷತ್ ಎಲ್ಲಾ ರೀತಿಯ ಬೆಂಬಲ ನೀಡುವದಾಗಿ ಘೋಷಿಸಿದರು.
ತಮಿಳುನಾಡಿನ ಮನ್ನಾರ್‍ಗುಡಿಯ ಮಠಾಧೀಶರಾದ ಜೀಯರ್ ಸ್ವಾಮೀಜಿ ಮಾತನಾಡಿ, ಜಾತಿ, ಬೇಧ ಮರೆತು ಪರಿಸರ, ನದಿಗಳ ಸೇವೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಎರಡು ರಾಜ್ಯಗಳ ಸಾಧುಸಂತರು ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಕಾರ್ಯಕರ್ತರು ನಡೆಸುತ್ತಿರುವ ಕಾರ್ಯಕ್ರಮದ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷರಾದ ಕರ್ನಲ್ ಮುತ್ತಣ್ಣ, ಕೊಡಗು ಜಿಲ್ಲೆಯ ಪರಿಸರ ಹಾಗೂ ಕಾವೇರಿ ನದಿ ಸಂರಕ್ಷಣೆ ಆದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸಬೇಕಾಗಿದೆ. ಈ ಸಂಬಂಧ ಸರಕಾರಗಳು ಕಾರ್ಯಯೋಜನೆ ರೂಪಿಸಬೇಕು ಎಂದರು.
ತಲಕಾವೇರಿಯಿಂದ ಕಾವೇರಿ ನದಿ ಸಮುದ್ರ ಸಂಗಮವಾಗುವ ಪೂಂಪ್‍ಹಾರ್
(ಮೊದಲ ಪುಟದಿಂದ) ತನಕ 3 ವಾರಗಳ ಕಾಲ ನಡೆಯುವ ಕಾವೇರಿ ಜಾಗೃತಿ ತೀರ್ಥಯಾತ್ರೆಯ ಮಾಹಿತಿ ಯನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್ ತಿಳಿಸಿದರು.
ಅಖಿಲ ಭಾರತ ಸಾಧುಸಂತರ ಸಂಘದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ, ಸಂಸ್ಥಾಪಕ ಶ್ರೀ ಗಣೇಶ ಸ್ವರೂಪಾನಂದ ಸ್ವಾಮೀಜಿ ನೇತೃತ್ವದಲ್ಲಿ 50 ಕ್ಕೂ ಅಧಿಕ ಸಾಧುಸಂತರು ಕಾರ್ಯಕರ್ತರು ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ 10 ಸಾಧುಸಂತರು, ತಮಿಳುನಾಡಿನ 25 ಸದಸ್ಯರು ಹಾಗೂ ಆಂಧ್ರ ಮತ್ತು ಕೇರಳದ ಸಾಧುಸಂತರು, ಮಠಾಧೀಶರು ಸೇರಿದಂತೆ ಒಟ್ಟು 40 ಕ್ಕೂ ಅಧಿಕ ಸಂತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಶ್ರೀ ಗಣೇಶ ಸ್ವಾರೂಪಾನಂದ ಸ್ವಾಮೀಜಿ ಮಾಹಿತಿ ನೀಡಿದರು.
ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಂತರಿಗೆ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ, ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ಅನು ಕಾರ್ಯಪ್ಪ, ಆಂದೋಲನದ ತಮಿಳುನಾಡು ಪ್ರಾಂತ್ಯದ ಸಂಚಾಲಕರಾದ ಆರ್.ವಾಸು ರಾಮಚಂದ್ರನ್, ವಿಶ್ವ ಹಿಂದು ಪರಿಷತ್‍ನ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜು, ಭಾಗಮಂಡಲ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಮತ್ತಿತರರು ಗಿಡಗಳನ್ನು ನೀಡುವ ಮೂಲಕ ಯಾತ್ರೆಗೆ ಶುಭ ಕೋರಿದರು. 5 ಕಳಶಗಳಲ್ಲಿ ಪವಿತ್ರ ಕಾವೇರಿ ತೀರ್ಥ ತುಂಬಿ ಪೂಜೆ ಸಲ್ಲಿಸಿ ಯಾತ್ರೆಯಲ್ಲಿ ಕೊಂಡೊಯ್ಯಲಾಯಿತು. ನವೆಂಬರ್ 13 ರಂದು ಯಾತ್ರೆಯ ಸಮಾರೋಪ ಸಂದರ್ಭ ಪೂಂಪ್‍ಹಾರ್ ಸಮುದ್ರ ಸಂಗಮದಲ್ಲಿ ತೀರ್ಥ ವಿಸರ್ಜಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕರಾದ ಶ್ರೀ ರಮಾನಂದ ಸ್ವಾಮೀಜಿ ತಿಳಿಸಿದರು.
ಯಾತ್ರೆಯಲ್ಲಿ ತಮಿಳುನಾಡು, ಕರ್ನಾಟಕ, ಕೇರಳ ವ್ಯಾಪ್ತಿಯ ಪ್ರಮುಖ ಸಾಧುಸಂತರಾದ ಶ್ರೀ ವೇದಾನಂದ ಸ್ವಾಮೀಜಿ, ಶ್ರೀ ನಾಗೇಶ್ವರಾನಂದ ಸರಸ್ವತಿ ಸ್ವಾಮೀಜಿ, ಶ್ರೀ ತ್ರಿಶೂಲಾನಂದ ಸ್ವಾಮೀಜಿ, ಸ್ವಾಮಿ ನಿರೂಪಾನಂದ, ಮಾತೆ ವೇದಾವತಿ ಮತ್ತಿತರರು ಇದ್ದರು.
ರಥಯಾತ್ರೆ ತಲಕಾವೇರಿಯಿಂದ ಹೊರಟು ಭಾಗಮಂಡಲ ತಲುಪಿ ನಂತರ ಸಂಗಮದಲ್ಲಿ ಮಹಾ ಆರತಿ ಬೆಳಗಲಾಯಿತು. ಅಯ್ಯಂಗೇರಿ ಮಾರ್ಗವಾಗಿ ಬಲಮುರಿಗೆ ತೆರಳಿದ ಯಾತ್ರಾ ತಂಡ ಮಹಾ ಆರತಿ ಬೆಳಗಿ ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಜಾಗೃತಿ ಮೂಡಿಸಿದರು. ಸಂಜೆ ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ತಂಡ ಸದಸ್ಯರೊಂದಿಗೆ ನದಿ ಸಂರಕ್ಷಣೆ ಬಗ್ಗೆ ಚರ್ಚಿಸಿದರು.
ಕಾವೇರಿ ನದಿ ಜಾಗೃತಿ ಯಾತ್ರೆ ತಂಡ ತಾ. 23 ರಂದು (ಇಂದು) ವೀರಾಜಪೇಟೆಯಿಂದ ಅಮ್ಮತ್ತಿ ಮಾರ್ಗವಾಗಿ ಗುಹ್ಯ, ಸಿದ್ದಾಪುರ, ನೆಲ್ಲಿಹುದಿಕೇರಿ ಮೂಲಕ ಕುಶಾಲನಗರಕ್ಕೆ ಆಗಮಿಸಿದ ನದಿ ತಟಗಳಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಸಂಜೆ ಕಣಿವೆ ರಾಮಲಿಂಗೇಶ್ವರ ದೇವಾಲಯದಲ್ಲಿ ತಂಡ ವಾಸ್ತವ್ಯ ಹೂಡಲಿದೆ. 24 ರಂದು ಬೆಳಿಗ್ಗೆ 9 ಗಂಟೆಗೆ ಕಣಿವೆಯಲ್ಲಿ ಕಾವೇರಿ ನದಿಗೆ ಮಹಾ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪಾಲ್ಗೊಳ್ಳುವರು. ನಂತರ ಯಾತ್ರಾ ತಂಡ ಕೊಡಗಿನಿಂದ ಹಾಸನ ಜಿಲ್ಲೆಯ ಕೊಣನೂರು ಭಾಗಕ್ಕೆ ಪ್ರವೇಶಿಸಲಿದೆ.