ಸೋಮವಾರಪೇಟೆ, ಅ. 23: ಶಿಕ್ಷಣ ಇಲಾಖೆಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಲಿಕಲಿ ತರಬೇತಿಯನ್ನು ಬಹಿಷ್ಕರಿಸಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳು, ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಮಕ್ಕಳಿಗೆ ಪಾಠ ಮಾಡಲು ಅವಕಾಶ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭಾಂಗಣದಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ನಲಿಕಲಿ ತರಬೇತಿ ಶಿಬಿರ ಪ್ರಾರಂಭವಾಗಿದ್ದು, ಅತಿಥಿಗಳ ಮಾತು ಮುಗಿಯುತ್ತಿದ್ದಂತೆ ಎದ್ದುನಿಂತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ (ಮೊದಲ ಪುಟದಿಂದ) ಇತರ ಶಿಕ್ಷಕರುಗಳು, ತರಬೇತಿಯನ್ನು ಬಹಿಷ್ಕರಿಸಿ ಸಭಾಂಗಣದಿಂದ ಹೊರಬಂದರು.

ಸರ್ಕಾರಿ ಶಾಲಾ ಶಿಕ್ಷಕರಿಗೆ ಇನ್ನಿಲ್ಲದಂತೆ ಒತ್ತಡ ಹೇರಲಾಗುತ್ತಿದ್ದು, ಇಲಾಖೆಯ ಇತರ ಕಾರ್ಯಗಳಿಗೆ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಪಾಠ ಮಾಡಲು ಸಮಯ ಇಲ್ಲದಂತಾಗಿದೆ. ಅಕ್ಷರ ದಾಸೋಹ, ಸಮವಸ್ತ್ರ, ಶೂ, ಹಾಲು, ಮಾತ್ರೆಗಳನ್ನು ನೀಡುವದೇ ಕೆಲಸವಾಗಿದೆ. ಇದರೊಂದಿಗೆ ನಲಿಕಲಿ ಯೋಜನೆಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ಸತತ 5 ದಿನಗಳ ಕಾಲ ತರಬೇತಿ ನೀಡಲು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಪಾಠ ಪ್ರವಚನಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಲಿಕಲಿ ಯೋಜನೆ ಪರಿಣಾಮಕಾರಿಯಾಗಿದ್ದರೆ ಖಾಸಗಿ ಶಾಲೆಯ ಮಕ್ಕಳಿಗೂ ಯೋಜನೆಯನ್ನು ವಿಸ್ತರಿಸಬೇಕು. ಸರ್ಕಾರಿ ಶಾಲೆಯ ಮಕ್ಕಳಿಗೆ ಮಾತ್ರ ನಲಿಕಲಿ ಯೋಜನೆ ಯಾಕೆ? ಖಾಸಗಿ ಶಾಲೆಗಳ ಶಿಕ್ಷಕರಿಗೂ ತರಬೇತಿ ನೀಡಬೇಕು. ಖಾಸಗಿ ಶಾಲೆಗಳಲ್ಲಿ ಹೆಚ್ಚು ಮಕ್ಕಳಿದ್ದರೂ ಅಲ್ಲಿನ ಶಿಕ್ಷಕರಿಗೆ ತರಬೇತಿಯಿಲ್ಲ; ಸರ್ಕಾರಿ ಶಾಲೆಗಳಲ್ಲಿ 1 ರಿಂದ 3ನೇ ತರಗತಿವರೆಗೆ ಮಕ್ಕಳ ಸಂಖ್ಯೆ ತೀರಾ ಕಡಿಮೆಯಿದ್ದರೂ ಸಹ ಅನಗತ್ಯವಾಗಿ ತರಬೇತಿ ನೀಡುವ ಮೂಲಕ ಶೋಷಿಸಲಾಗುತ್ತಿದೆ. ಶಿಕ್ಷಕರನ್ನು ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸುತ್ತಿರುವದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ ಎಂದು ಮಂಜುನಾಥ್ ಆರೋಪಿಸಿದರು.

ಈಗಾಗಲೇ ತಾಲೂಕಿನ 157 ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಪ್ರಸಕ್ತ ವರ್ಷ 3 ಶಾಲೆಗಳು ಮುಚ್ಚಲ್ಪಟ್ಟಿವೆ. ಬಹುತೇಕ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶಾತಿಯೂ ಆಗಿಲ್ಲ. ಸರ್ಕಾರಿ ಶಾಲೆಗಳಿಗೆ ಅಪ್ರಯೋಜಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಖಾಸಗಿ ಶಾಲೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಏಕೋಪಧ್ಯಾಯ ಶಾಲೆಗಳಿಂದಲೂ ಶಿಕ್ಷಕರನ್ನು ಕರೆಸಲಾಗಿದ್ದು, ನ. 3 ಮತ್ತು 4 ರಂದು ಮೊದಲನೇ ಸಂಕಲನಾತ್ಮಕ ಪರೀಕ್ಷೆ ಇದೆ. ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವ ಬದಲು ತರಬೇತಿಗೆ ಹಾಜರಾಗಬೇಕಿದೆ. ಪ್ರಾಥಮಿಕ ಶಾಲೆಯ 510 ಶಿಕ್ಷರುಗಳಲ್ಲಿ 100 ಶಿಕ್ಷಕರನ್ನು ನಲಿಕಲಿ ತರಬೇತಿಗೆ, 50 ಶಿಕ್ಷಕರನ್ನು ಇಂಗ್ಲೀಷ್ ತರಬೇತಿಗೆ, 8 ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ನಿಯೋಜಿಸಲಾಗಿದ್ದು, ಮಕ್ಕಳ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಶಿಕ್ಷಕರುಗಳು ಆರೋಪಿಸಿದರು.

ರಾಷ್ಟ್ರದಾದ್ಯಂತ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು. ನಲಿಕಲಿ ಯೋಜನೆಯನ್ನು ರದ್ದುಗೊಳಿಸಬೇಕು. ಒಂದು ವೇಳೆ ಯೋಜನೆಯನ್ನು ಮಾಡಲೇಬೇಕಿದ್ದರೆ ಇದಕ್ಕೆ ಅನುಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕು. ಕಚೇರಿ ಕೆಲಸ ಕಾರ್ಯಗಳಿಗೆ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜ್ ಒತ್ತಾಯಿಸಿದರು.

ಕೂಡಿಗೆ ಡಯಟ್‍ನ್ ಹಿರಿಯ ಉಪನ್ಯಾಸಕರುಗಳಾದ ವೇದಮೂರ್ತಿ, ಜವರೇಗೌಡ, ಬಿಆರ್‍ಸಿ ಮಾಲತಿ ನಾಯಕ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳಾದ ವನಜ, ಹರೀಶ್, ಪದ್ಮಾವತಿ, ಉಷಾರಾಣಿ ಅವರುಗಳು ತರಬೇತಿ ನೀಡಲೆಂದು ಆಗಮಿಸಿದ್ದರು.

ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಬಸವರಾಜ್, ಗೌರವಾಧ್ಯಕ್ಷ ಯೋಗೇಶ್, ಮಹದೇವ್, ರೂಪಾ, ವನಜ, ರಮೇಶ್, ರೇವಣ್ಣ, ವಿಷ್ಣುವರ್ಧನ ಸೇರಿದಂತೆ ತರಬೇತಿಯಲ್ಲಿ ಭಾಗವಹಿಸಿದ್ದ 100ಕ್ಕೂ ಅಧಿಕ ಶಿಕ್ಷಕರು ತರಬೇತಿಯನ್ನು ಬಹಿಷ್ಕರಿಸಿದರು.