ಸೋಮವಾರಪೇಟೆ,ಅ.22: ದಿನಂಪ್ರತಿ ಆಟೋ ಓಡಿಸಿಕೊಂಡು ಬಾಡಿಗೆಯಲ್ಲೇ ಮುಳುಗೇಳುವ ಆಟೋ ಚಾಲಕರು ಇಂದು ಬಾಡಿಗೆಯ ಬವಣೆಯನ್ನು ಬದಿಗಿಟ್ಟು ಮೈದಾನದಲ್ಲಿ ಕ್ರೀಡಾಸ್ಫೂರ್ತಿ ಯೊಂದಿಗೆ ಮಿಂಚಿದರು.
ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಸದಸ್ಯರಿಗೆ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟದಲ್ಲಿ ಚಾಲಕರುಗಳು ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸಿದ್ದರು.
ಆಟೋ ಚಾಲಕರ ಸಂಘದಲ್ಲಿ ಬಹುತೇಕ ಯುವಕರೇ ಇರುವ ಹಿನ್ನೆಲೆ ಎಲ್ಲಾ ಸ್ಫರ್ಧೆಗಳೂ ಜಿದ್ದಾಜಿದ್ದಿನಿಂದ ಕೂಡಿತ್ತು. ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸಿದ್ದ ಪಟುಗಳು ಮೈ ರೋಮಾಂಚನಗೊಳ್ಳುವ ಪ್ರದರ್ಶನ ನೀಡಿದರು.
ಆಟೋ ಚಾಲಕರ ಸಂಘದ ಸದಸ್ಯರುಗಳು ಕಬಡ್ಡಿ, ಬಾಂಬ್ ಇನ್ ದ ಸಿಟಿ, ಹಗ್ಗ ಜಗ್ಗಾಟ ಹಾಗೂ ಕ್ರಿಕೆಟ್ ಪಂದ್ಯಾಟಗಳಲ್ಲಿ ಭಾಗವಹಿಸಿ ಬೆಳಗ್ಗಿನಿಂದ ಸಂಜೆಯವರೆಗೂ ಮೈದಾನದಲ್ಲಿ ಸಂಭ್ರಮಿಸಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬೆಂಗಳೂರಿನ ಉದ್ಯಮಿ ಮಲ್ಲೇಶ್ ಮಾತನಾಡಿ, ಭಾಷಾ ಬೆಳವಣಿಗೆಯಲ್ಲಿ ಆಟೋ ಚಾಲಕರ ಪಾತ್ರ ಮಹತ್ವ ದ್ದಾಗಿದೆ. ಕನ್ನಡಪರ ಚಟುವಟಿಕೆಯಲ್ಲಿ ಆಟೋ ಚಾಲಕರು ಮುಂಚೂಣಿ ಯಲ್ಲಿದ್ದಾರೆ ಎಂದು ಶ್ಲಾಘಿಸಿದರಲ್ಲದೇ, ಕ್ರೀಡಾಕೂಟಗಳಲ್ಲಿ ಭಾಗವಹಿಸುವ ದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳ ಬಹುದಾಗಿದೆ ಎಂದರು. ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರುಳೀಧರ್ ಮಾತನಾಡಿ, ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಅಲ್ಟ ಸಮಯವನ್ನು ಕ್ರೀಡೆ ಹಾಗೂ ದೈಹಿಕ ವ್ಯಾಯಾಮಕ್ಕೆ ಮೀಸಲಿರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಆಟೋ ಚಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕøತಿಯೊಂದಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಬಿ.ಜಿ. ಇಂದ್ರೇಶ್, ಸಂಘದ ಗೌರವ ಅಧ್ಯಕ್ಷ ಸಿ.ಡಿ. ನೆಹರು, ಕಾರ್ಯದರ್ಶಿ ಹೆಚ್.ಕೆ. ಗಂಗಾಧರ್, ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಶಶಿಧರ್, ಮಹಮ್ಮದ್ ಶಫಿ, ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ, ಉಮೇಶ್, ಹಸನಬ್ಬ, ಐಗೂರು ಆಟೋ ಚಾಲಕರ ಸಂಘದ ಅಧ್ಯಕ್ಷ ಅಪ್ಪು ಮತ್ತಿತರರು ಉಪಸ್ಥಿತರಿದ್ದರು.