ಸೋಮವಾರಪೇಟೆ,ಅ.22: ಸುತ್ತಮುತ್ತಲಿನ ಪರಿಸರ, ನೆಲ ಜಲ, ಭಾಷೆ, ಪ್ರಸ್ತುತದ ವಿದ್ಯಮಾನ, ಘಟಿಸಿದ ಇತಿಹಾಸಗಳ ಮೆಲುಕಿನೊಂದಿಗೆ ತಮ್ಮ ಮನದಾಳದಲ್ಲಿ ಮೂಡುವ ಭಾವನೆಗಳಿಗೆ ಅಕ್ಷರ ರೂಪ ನೀಡಿ ಕವನದ ಸಾಲುಗಳಲ್ಲಿ ಹಿಡಿದಿಟ್ಟು ವಾಚನದ ಮೂಲಕ ಪ್ರಸ್ತುತ ಪಡಿಸಿದ ಕವಿಗಳು, ಕೇಳುಗರ ಕಿವಿಗಳಿಗೆ ಇಂಪು ನೀಡುವದರೊಂದಿಗೆ ಸಾಮಾಜಿಕ ಕಾಳಜಿಯನ್ನೂ ಜಾಗೃತಗೊಳಿಸುವಲ್ಲಿ ಯಶಸ್ವಿಯಾದರು.
ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಗುರುವಂದನೆ, ಜಿಲ್ಲಾ ಮಟ್ಟದ ಕವಿಗೋಷ್ಠಿ ಹಾಗೂ ವಿದ್ಯಾರ್ಥಿಗಳಿಗೆ ನಡೆಸಿದ ರಸಪ್ರಶ್ನೆ ಕಾರ್ಯಕ್ರಮ ಹೋರಾಟದ ಆಚೆಗಿನ ಸಾಹಿತ್ಯದ ಸವಿಯನ್ನು ಕೇಳುಗರಿಗೆ ಉಣಬಡಿಸುವಲ್ಲಿ ಸಫಲವಾಯಿತು.
ಕನ್ನಡ ನಾಡು, ನುಡಿ, ನೆಲ ಜಲದ ಬಗ್ಗೆ ಅನೇಕ ಹೋರಾಟ ಗಳನ್ನು ನಡೆಸುತ್ತಲೇ ಬಂದಿರುವ ಕರವೇ ಪದಾಧಿಕಾರಿಗಳು, ಸಾಹಿತ್ಯದ ನೆಲೆಯಲ್ಲೂ ಭಾಷಾ ಶ್ರೀಮಂತಿಕೆಯನ್ನು ಪಸರಿಸಿದರು. ಜಿಲ್ಲೆಯ 16 ಮಂದಿ ಉದಯೋನ್ಮುಖ ಕವಿಗಳು ವಾಚಿಸಿದ ಕವನಗಳಲ್ಲಿ ಹತ್ತು ಹಲವು ಚಿಂತನೆಗೀಡು ಮಾಡುವ ಸಾಲುಗಳೇ ತುಂಬಿದ್ದವು.
ಹಿರಿಯ ಕವಯತ್ರಿ ಜಲಾ ಕಾಳಪ್ಪ ಅವರು ವಾಚಿಸಿದ ‘ಸಾವಿನ ಆಟ ಬ್ಲೂ ವೇಲ್’ ಶೀರ್ಷಿಕೆಯ ಕವನದಲ್ಲಿ ಸಾವಿನ ಆಟಕ್ಕೆ ಈಡಾಗದಂತೆ ಜಾಗೃತಿ ಮೂಡಿಸಿದರು. ಎಸ್.ಆರ್.ನಾಗೇಶ್ ವಾಚಿಸಿದ ನದಿಮುಖ ದರ್ಶನ ಕವನದಲ್ಲಿ ಕೊಡಗಿನ ಜೀವ ನದಿ ಕಾವೇರಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಬಿ.ಎ. ಮಧುಕರ್ ಅವರಿಂದ ಮೂಡಿಬಂದ ಅಂದು-ಇಂದು ಶೀರ್ಷಿಕೆಯ ಕವನದಲ್ಲಿ ಹಿಂದಿನ ತಲೆಮಾರಿನ ಜೀವನ ಶ್ರೀಮಂತಿಕೆ ಹಾಗೂ ಇಂದಿನ ಜಂಜಾಟಗಳ ಬಗ್ಗೆ ವಿವರಣೆ ನೀಡಿದರು.
ಹಿರಿಯ ಕವಯತ್ರಿ ಎಲಿಜಬೆತ್ ಲೋಬೋ ವಾಚಿಸಿದ ಯಮನ ಪಾದಕ್ಕೆ ದಾರಿ ಕವನದಲ್ಲಿ ದ್ವಿಚಕ್ರ ವಾಹನ ಸವಾರರು ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಕರೆಗಂಟೆ ಬಾರಿಸಿದರು. ಪಿ.ಎಲ್. ವೈಲೇಶ್ ಅವರ ಕರುನಾಡು ಕವನದಲ್ಲಿ ಕನ್ನಡ ನಾಡು ನುಡಿಯ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಪ್ರಸ್ತುತಪಡಿಸಿದರು.
ಜಯನಾಯಕ್ ಅವರು ವಾಚಿಸಿದ ಹೋಗಿ ಬಂತಣ್ಣ ಕವನದ ಸಾಲುಗಳಲ್ಲಿ ಕಾಲದ ಬೆಲೆಯನ್ನು ತಿಳಿಸುವ ಅಂಶಗಳೇ ತುಂಬಿದ್ದವು. ಅಂಗವಿಕಲೆಯಾದರೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಎಸ್.ಕೆ. ಈಶ್ವರಿ ಅವರು ವೀಲ್ ಚೇರ್‍ನಲ್ಲೇ ಆಗಮಿಸಿ ಅಕ್ರಮ ಮರಳು ಸಾಗಾಟ, ಮರಳಿನ ಕೃತಕ ಅಭಾವ, ನದಿಮೂಲಗಳ ನಿರ್ನಾಮದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಕವನವನ್ನು ಪ್ರಸ್ತುತಪಡಿಸಿದರು.
ಉದಯೋನ್ಮುಖ ಕವಯತ್ರಿ ಲಾವಣ್ಯ ಅವರು ವಾಚಿಸಿದ ನಗ್ನ ಸತ್ಯ ಕವನದ ಸಾಲುಗಳಲ್ಲಿ ಭ್ರಷ್ಟಾಚಾರ, ಕಪ್ಪು ಹಣದ ಬಗ್ಗೆ ತಮ್ಮ ಸಾತ್ವಿಕ ಕೋಪವನ್ನು ಹೊರಗೆಡವಿದರು. ಪದಗಳ ಮೂಲಕವೇ ಕನ್ನಡಾಂಬೆಗೆ ನಮನ ಸಲ್ಲಿಸಿದ ಕವಿ ದೊರೇಶ್ ಅವರು, ಕನ್ನಡಾಂಬೆಯ ಸೊಬಗಿನ ಬಗ್ಗೆ ಸಂತಸಪಟ್ಟರು. ಸುಶೀಲ ಹಾನಗಲ್ ಅವರು ವಾಚಿಸಿದ ಕನ್ನಡ ಭಾಷೆ ಕವನದಲ್ಲಿ, ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಬಡವಾಗುತ್ತಿದೆಯೇ? ಎಂಬ ಚಿಂತನೆಯನ್ನು ಓರೆಗೆ ಹಚ್ಚುವಂತೆ ಮಾಡಿದರು.
ಕೊಡಗಿನ ಸುಂದರ ವನಸಿರಿ, ಪ್ರಕೃತಿಯ ಸೌಂದರ್ಯವನ್ನು ಸಂದೇಶ್ ಜೋಸೆಫ್ ಡಿಸೋಜ ಅವರು ತಮ್ಮ ಕವನದ ಸಾಲುಗಳಲ್ಲಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದರು. ಸ್ವದೇಶಿ ಕಾಫಿಯನ್ನೇ ಬಳಸಿ ಎಂಬ ಅಂತಿಮ ಸಂದೇಶ ವಿರುವ ಕಾಫಿಯ ಕರುನಾಡು ಕವನವನ್ನು ಅಶ್ವಿನಿ ಕೃಷ್ಣಕಾಂತ್ ವಾಚಿಸಿದರು. ಭ್ರಷ್ಟರು ನಾಡು ಕಟ್ಟಲು ಬರುತ್ತಿದ್ದಾರೆ ಎಂದು ಭ್ರಷ್ಟ ವ್ಯವಸ್ಥೆಗೆ ಕವನದ ಸಾಲುಗಳ ಮೂಲಕವೇ ಧಿಕ್ಕಾರ ಹಾಕಿ ಭ್ರಷ್ಟರ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಯುವ ಕವಯತ್ರಿ ಪೂಜಾ ಮಾಡಿದರು.
ಪ್ರಸ್ತುತದ ವಿದ್ಯಮಾನ, ಮಳೆಗೆ ಕೆರೆಯಂತಾದ ಬೆಂಗಳೂರಿನ ಮನೆ, ದಿನನಿತ್ಯ ನಡೆಯುವ ರಾಜಕೀಯ ದೊಂಬರಾಟಗಳ ನಡುವೆ ಸಾಮಾನ್ಯ ಮನುಷ್ಯರನ್ನು ಬದುಕಲು ಬಿಡಿ ಎಂದು ಹಿರಿಯ ಸಾಹಿತಿ ನ.ಲ. ವಿಜಯ ಅವರು ತಮ್ಮ ಕವನದ ಸಾಲುಗಳಲ್ಲಿ ಸಾತ್ವಿಕ ಕೋಪದೊಂದಿಗೆ ಮನವಿ ಮಾಡಿದರು. ಪುಟ್ಟಣ್ಣ ಆಚಾರ್ಯ ಅವರು ವಾಚಿಸಿದ ಕವನದಲ್ಲಿ ಸೆಲ್ಫಿ ಸಂಭ್ರಮ ಜೀವಕ್ಕೆ ಮುಳುವಾಗೀತು ಜೋಕೆ ಎಂದು ಎಚ್ಚರಿಕೆ ನೀಡಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕವಯತ್ರಿ ಸುನೀತಾ ಲೋಕೇಶ್ ವಹಿಸಿದ್ದರು.
ಕಿತ್ತೂರು ಪ್ರಾಥಮಿಕ ಶಾಲೆಯ ಶಿಕ್ಷಕ ಎ.ಧರ್ಮಪ್ಪ, ದೊಡ್ಡಮಳ್ತೆ ಸ.ಹಿ.ಪ್ರಾ ಶಾಲೆಯ ಆಶಾ ಪುಟ್ಟರಾಜು, ಸಂತ ಜೋಸೆಫರ ಪ್ರೌಢಶಾಲೆಯ ಸರ್ದಾರ ಬಾಷಾ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಎಂ.ಎಸ್.ದಿನೇಶ್ ಅವರನ್ನು ಸನ್ಮಾನಿಸುವ ಮೂಲಕ ಗುರುವಂದನೆ ಅರ್ಪಿಸಿದರು.
ಸಾಂಸ್ಕøತಿಕ ವಿಭಾಗದಲ್ಲಿ ಜೋಸೆಫ್ ಸಾಹಿತ್ಯ ಪ್ರಶಸ್ತಿ ಪುರಸ್ಕøತರಾದÀ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಎಲಿಜಬೆತ್ ಲೋಬೋ, ವಿ.ವಿ.ಪಾರ್ವತಮ್ಮ ಸಂಗೀತ ಪ್ರಶಸ್ತಿಗೆ ಭಾಜನರಾಗಿರುವ ತಣ್ಣೀರುಹಳ್ಳದ ಪುರುಶೋತ್ತಮ, ಇಂದಿರಾ ನೃತ್ಯಪಟು ಪ್ರಶಸ್ತಿ ಪುರಸ್ಕøತ ಭರತನಾಟ್ಯ ಕಲಾವಿದ ಶಂಕರಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಒಕ್ಕಲಿಗರ ಸಂಘದ ಕುವೆಂಪು ವಿದ್ಯಾಸಂಸ್ಥೆ ಪ್ರಥಮ, ಸಂತ ಜೋಸೆಫರ ಶಾಲೆ ದ್ವಿತೀಯ ಹಾಗು ಎಸ್‍ಜೆಎಂ ಬಾಲಿಕಾ ಪ್ರೌಢಶಾಲೆ ತೃತೀಯ ಸ್ಥಾನ ಗಳಿಸಿದವು. ಕಾಲೇಜು ವಿಭಾಗದಲ್ಲಿ ಲೇಖನ ಪ್ರಥಮ ಹಾಗೂ ತನುಶ್ರೀ ದ್ವಿತೀಯ ಸ್ಥಾನ ಗಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ.ಸುದರ್ಶನ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ತಾಲೂಕು ಅಧ್ಯಕ್ಷ ಕೆ.ಎನ್.ದೀಪಕ್, ಮಹಿಳಾ ಘಟಕ ಅಧ್ಯಕ್ಷೆ ರೂಪ ಸುರೇಶ್, ನಗರಾಧ್ಯಕ್ಷ ಬಿ.ಎಸ್.ಮಂಜುನಾಥ್, ಬಿಇಒ ನಾಗರಾಜಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ.ಮುರುಳಿಧರ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ.ಲೋಕೇಶ್, ಜಾನಪದ ಪರಿಷತ್‍ನ ತಾಲೂಕು ಕಾರ್ಯದರ್ಶಿ ವಿಜಯ್ ಹಾನಗಲ್ ಮತ್ತಿತರರು ಉಪಸ್ಥಿತರಿದ್ದರು.
ಸಾಹಿತ್ಯ ಘಟಕದ ಪದಾಧಿಕಾರಿಗಳಾದ ರಾಣಿ ರವೀಂದ್ರ, ಅನಿತಾ ಶುಭಾಕರ್, ದೀಪಿಕಾ ಸುದರ್ಶನ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.