ಗೋಣಿಕೊಪ್ಪಲು,ಅ.22: ಕುಶಾಲನಗರ ಮೀಸಲು ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಮಾಲ್ಧಾರೆ ಶಾಖೆಯ ಸಿಪಿಟಿ 21ರಲ್ಲಿ ಅಕ್ರಮವಾಗಿ ಮೀಸಲು ಅರಣ್ಯವನ್ನು ಪ್ರವೇಶಿಸಿ ತೇಗದ ಮರ ಕಡಿತಲೆ ಪ್ರಕರಣದಲ್ಲಿ ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತರೆ ಇಬ್ಬರು ಆರೋಪಿಗಳು ಕಾರ್ಯಾಚರಣೆ ಸಂದರ್ಭ ಕಾವೇರಿ ನದಿಗೆ ಹಾರಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಸುಮಾರು ರೂ.3 ಲಕ್ಷಕ್ಕೂ ಅಧಿಕ ಮೌಲ್ಯದ ತೇಗದ 9 ನಾಟಾಗಳನ್ನು ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಂಡಿದೆ.ಮಾಲ್ದಾರೆ ಮೀಸಲು ಅರಣ್ಯದ ಅವರೆಗುಂದೆ ಹಾಡಿ ವಾಲ್ನೂರು ಕಂಡಿ ಕಾವೇರಿ ನದಿ ಪಕ್ಕದಲ್ಲಿ ತೇಗದ ಮರವನ್ನು ಕಡಿದು ನಾಟಾಗಳಾಗಿ ಪರಿವರ್ತಿಸುತ್ತಿರುವ ಸಂದರ್ಭ ರ್ಯಾಪಿಡ್ ರೆಸ್ಪಾನ್ಸ್ ತಂಡ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಇದೇ ಸಂದರ್ಭ ಮತ್ತಿಬ್ಬರು ಆರೋಪಿಗಳು ಕಾವೇರಿ ನದಿಗೆ ಧುಮುಕಿ, ಈಜಿ ಮತ್ತೊಂದು ದಡ ಸೇರಿ ಪರಾರಿಯಾದರು ಎನ್ನಲಾಗಿದೆ.
ಪ್ರಕರಣವು ತಾ.20 ರಂದು ಅಪರಾಹ್ನ 3ಗಂಟೆ ಸುಮಾರಿಗೆ ನಡೆದಿದ್ದು ಸಿದ್ದಾಪುರ ಸಮೀಪ ವಾಲ್ನೂರು ಕಂಡಿ ಅರಣ್ಯದಲ್ಲಿ ತೇಗದ ಮರ ಕಡಿದು 9 ನಾಟಾಗಳಾಗಿ ಪರಿವರ್ತಿ ಸಿದ್ದರು ಎನ್ನಲಾಗಿದೆ. ತೇಗದ ನಾಟಾಗಳನ್ನು ಕಾವೇರಿ ನದಿಯಲ್ಲಿ ಇಳಿಬಿಟ್ಟು ಹಗ್ಗದ ಸಹಾಯದಿಂದ ವಾಲ್ನೂರು ಗ್ರಾಮದ ಮತ್ತೊಂದು ದಡಕ್ಕೆ ಎಳೆದು ತರಲಾಗುತ್ತಿತ್ತು ಎನ್ನಲಾಗಿದೆ. ಕಳೆದ ಹಲವು ವರ್ಷ ಗಳಿಂದ ವಾಲ್ನೂರು, ತ್ಯಾಗತ್ತೂರು ಹಾಗೂ ನಂಜರಾಯ ಪಟ್ಟಣದ ಕೆಲವು ವ್ಯಕ್ತಿಗಳ ಶಾಮೀಲಾತಿ ಯೊಂದಿಗೆ ನಿರಂತರ ಮರಹನನ ವಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಕಳೆದ ಮೂರು ತಿಂಗಳಿನಿಂದ ಮಾಲ್ಧಾರೆ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಪಹರೆಗೆ ನಿಯೋಜಿಸಲಾಗಿದ್ದು,
(ಮೊದಲ ಪುಟದಿಂದ) ತಾ.20 ರಂದು ಪ್ರಕರಣ ಬಯಲಾಗಿದೆ.
ಕೂಡುಗದ್ದೆ ಗುಹ್ಯ ಗ್ರಾಮದ 28ವರ್ಷ ಪ್ರಾಯದ ಮಿಥುನ್ ಮೋರಿಸ್, ನಂಜರಾಯಪಟ್ಟಣದ ಕೂಲಿ ಕಾರ್ಮಿಕ ಮಂಜು( 45) ಹಾಗೂ 38 ವರ್ಷ ಪ್ರಾಯದ ನೆಲ್ಲಿಹುದಿಕೇರಿ ಹೂಳೆಕೆರೆ ನಿವಾಸಿ ವಿಲ್ಸನ್ ಎಂಬವರ ವಿರುದ್ಧ ಕುಶಾಲನಗರ ವಲಯಾರಣ್ಯಾಧಿಕಾರಿ ಗಳ ಕಚೇರಿಯಲ್ಲಿ 1963 ಹಾಗೂ 1969 ಕರ್ನಾಟಕ ಅರಣ್ಯ ಕಾಯ್ಧೆ ಮತ್ತು ನಿಯಮ ಪ್ರಕಾರ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಓರ್ವನನ್ನು ಕಾರ್ಯಾಚರಣೆ ಸಂದರ್ಭ ಬಂಧಿಸಲಾಗಿದ್ದು, ಇತರೆ ಇಬ್ಬರು ಆರೋಪಿಗಳ ಪತ್ತೆಗೆ ಶೋಧಕಾರ್ಯ ಮುಂದುವರೆದಿದೆ ಎನ್ನಲಾಗಿದೆ.
ಕುಶಾಲನಗರ ವಲಯಾರಣ್ಯಾಧಿ ಕಾರಿ ಸಿ.ಆರ್.ಅರುಣ್ ಮಾರ್ಗದರ್ಶ ನದಲ್ಲಿ ಉಪ ವಲಯಾರಣ್ಯಾಧಿಕಾರಿ ಗಳಾದ ಮಂಜುನಾಥ್ ಗೂಳಿ, ರಂಜನ್, ಅರಣ್ಯ ರಕ್ಷಕ ಸಚಿನ್, ಅಶೋಕ್ ಮೋಲಿಮನಿ, ರ್ಯಾಪಿಡ್ ರೆಸ್ಪಾನ್ಸ್ ಟೀಮ್ ನ ಪ್ರವೀಣ್, ರಾಜೇಶ್, ಮಂಜೇಶ್, ಪ್ರದೀಪ್, ಶಶಿ ಹಾಗೂ ರಾಜಪ್ಪ ಅವರುಗಳು ಕಾರ್ಯಾ ಚರಣೆ ತಂಡದಲ್ಲಿ ಪಾಲ್ಗೊಂಡಿದ್ದರು.
-ಟಿ.ಎಲ್.ಶ್ರೀನಿವಾಸ್