ಸೋಮವಾರಪೇಟೆ,ಅ.22: ಅಧಿಕಾರಿಗಳು, ಜನಪ್ರತಿನಿಧಿಗಳು, ನಾಯಕರುಗಳ ಅನಾಧರಕ್ಕೆ ಒಳಗಾಗಿರುವಂತೆ ಕಂಡುಬರುತ್ತಿರುವ ಸೋಮವಾರಪೇಟೆ ಪಟ್ಟಣದಲ್ಲಿ ಸಮಸ್ಯೆಗಳಿಗೆ ಬರವಿಲ್ಲ. ಎಲ್ಲೂ ನಡೆಯದ ರಾಜಕೀಯ ಮೇಲಾಟಕ್ಕೆ ಮಾತ್ರ ಹೆಸರುವಾಸಿಯಾದ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ರಾಜಕೀಯ ಮಾಡುವವರು ಕಾಣುವದಿಲ್ಲ!ಸ್ಮಾರಕದಂತಾಗಿರುವ ಶತಮಾನೋತ್ಸವ ಭವನ, 5 ವರ್ಷಗಳಾದರೂ ಪೂರ್ಣಗೊಳ್ಳದ ಟರ್ಫ್ ಮೈದಾನ, ಅಗಲೀಕರಣ ಗೊಳ್ಳದ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಕಾಣದ ಪಟ್ಟಣ, ಸೂಕ್ತ ಸೌಲಭ್ಯಗಳಿಲ್ಲದೇ ಸೊರಗುತ್ತಿರುವ ಆಸ್ಪತ್ರೆ, ಪಟ್ಟಣದಲ್ಲಿನ ಪಾರ್ಕಿಂಗ್ ಸಮಸ್ಯೆ, ವಿಲೇವಾರಿಯಾಗದ ಅಕ್ರಮ ಸಕ್ರಮ ಸಮಿತಿಯ ಅರ್ಜಿಗಳು, ಗುಂಡಿ ಬಿದ್ದಿರುವ ಗ್ರಾಮೀಣ ಭಾಗದ ರಸ್ತೆಗಳು, ಪಟ್ಟಣದಲ್ಲಿ ಕೋಟಿ ವೆಚ್ಚದ ಮಾರುಕಟ್ಟೆ ಸೋರಿಕೆ, ತಾಂತ್ರಿಕ ಕಾಲೇಜುಗಳ ಕೊರತೆ ಹೀಗೆ.., ಇವುಗಳ ಪಟ್ಟಿ ಬೆಳೆಯುತ್ತವೆ. ಇದಕ್ಕೆ ಸೇರ್ಪಡೆಗೊಳ್ಳಬೇಕಿರುವದು ಸೋಮವಾರಪೇಟೆಯ ಹೃದಯ ಭಾಗದಲ್ಲಿರುವ ಮಿನಿ ವಿಧಾನಸೌಧ!

ಸುಣ್ಣಬಣ್ಣ ಕಾಣದೆ, ಯಾವದೇ ದುರಸ್ತಿ ಕಾರ್ಯ ನಡೆಯದೇ ಎರಡು ದಶಕ ಪೂರೈಸಿರುವ ಈ ಕಟ್ಟಡ ಮುಂದಿನ ಕೆಲ ವರ್ಷಗಳಲ್ಲಿ ಧರಾಶಾಹಿಯಾದರೂ ಆಶ್ಚರ್ಯ ಪಡಬೇಕಿಲ್ಲ. ಎರಡು ಅಂತಸ್ತಿನ ಕಟ್ಟಡವಾದರೂ ಮಳೆಗಾಲದಲ್ಲಿ ಟಾರ್ಪಲ್ ಕಟ್ಟಿಕೊಂಡು ಕಾರ್ಯನಿರ್ವಹಿಸಬೇಕಾದ, ದಾಖಲೆ ಪತ್ರಗಳು, ಕಂಪ್ಯೂಟರ್‍ಗಳನ್ನು ಸಂರಕ್ಷಿಸಿಕೊಳ್ಳಬೇಕಾದ ದುಸ್ಥಿತಿ ಆಡಳಿತದ ಶಕ್ತಿ ಕೇಂದ್ರದ್ದು!

ತಾಲೂಕಿನ ಮಿನಿ ವಿಧಾನಸೌಧ ಮಳೆಗಾಲದಲ್ಲಿ ಸೋರಲು ಪ್ರಾರಂಭಿಸಿ ಅನೇಕ ವರ್ಷಗಳೇ ಕಳೆದಿವೆ. ಆದರೆ ಇದುವರೆಗೂ ಕಟ್ಟಡ ದುರಸ್ತಿಗೆ ಸರ್ಕಾರ ಅನುದಾನ ಕಲ್ಪಿಸದ ಹಿನ್ನೆಲೆ, ಕಂದಾಯ ಇಲಾಖೆಯ ಸಾವಿರಾರು ಕಡತಗಳನ್ನು ರಕ್ಷಣೆ

(ಮೊದಲ ಪುಟದಿಂದ) ಮಾಡಿಕೊಳ್ಳುವದಕ್ಕೆ ಹರಸಾಹಸ ಪಡಬೇಕಾಗಿದೆ. 1997ರಲ್ಲಿ ನಿರ್ಮಾಣ ವಾದ ತಾಲೂಕು ತಹಶೀಲ್ದಾರರ ಕಟ್ಟಡಕ್ಕೆ ಮಿನಿ ವಿಧಾನಸೌಧ ಎಂದು ನಾಮಕರಣ ಮಾಡಿದ್ದನ್ನು ಹೊರತುಪಡಿಸಿ ಅದಕ್ಕೆ ನ್ಯಾಯೋಚಿತ ವಾಗಿ ಕಲ್ಪಿಸಬೇಕಾದ ಸೌಕರ್ಯಗಳನ್ನು ಇದುವರೆಗೂ ಕಲ್ಪಿಸಿಲ್ಲ.

20 ವರ್ಷಗಳ ಹಿಂದೆಯೇ ಈ ಕಟ್ಟಡಕ್ಕೆ ಸುಮಾರು 1 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ, ಖಜಾನೆ, ಚುನಾವಣೆ ಶಾಖೆ, ಆರ್‍ಟಿಸಿ ವಿತರಣಾ ಕೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರ, ದಾಖಲೆಗಳ ಕೊಠಡಿ, ನೆಮ್ಮದಿ ಕೇಂದ್ರ, ಭೂಮಿ ಶಾಖೆ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ವಿಭಾಗಗಳು ಈ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದರೂ ಕಟ್ಟಡದ ದುಸ್ಥಿತಿಯ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ.

ಧಾರಾಕಾರ ಮಳೆ ಸುರಿದರೆ ಕೊಠಡಿಗಳ ಮೇಲ್ಚಾವಣಿಯಲ್ಲಿ ನೀರು ಜಿನುಗುತ್ತದೆ. ಬಹುತೇಕ ವಿಭಾಗಗಳು ಕಂಪ್ಯೂಟರೀಕರಣಗೊಂಡಿದ್ದು, ಶೀತಕ್ಕೆ ಕಂಪ್ಯೂಟರ್‍ಗಳನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳುವದೇ ಕಷ್ಟಕರ ಎಂದು ಸಿಬ್ಬಂದಿಗಳು ಅಳಲುತೋಡಿ ಕೊಳ್ಳುತ್ತಾರೆ. ಇದರೊಂದಿಗೆ ಆರ್‍ಟಿಸಿ ವಿತರಿಸುವ ವಿಭಾಗದಲ್ಲಿ ಮೇಲ್ಚಾವಣಿಗೆ ಪ್ಲಾಸ್ಟಿಕ್ ಹೊದಿಕೆಯನ್ನು ಕಟ್ಟಿ ಮಳೆ ನೀರಿನಿಂದ ರಕ್ಷಿಸಿಕೊಳ್ಳುವ ಪ್ರಯತ್ನ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ರೆಕಾರ್ಡ್ ರೂಂನಲ್ಲಿ 1,37,640ಕ್ಕೂ ಅಧಿಕ ಕಡತಗಳಿದ್ದು, ಅವುಗಳ ರಕ್ಷಣೆಗೆ ಹರಸಾಹಸ ಪಡುವಂತಾಗಿದೆ. ಭೂಮಿ ಕೇಂದ್ರದಲ್ಲಿ ಮೇಲ್ಚಾವಣಿ ಹಾಗೂ ಗೋಡೆಗಳಲ್ಲಿ ಅಲ್ಪ ಮಳೆಗೂ ನೀರು ಸೋರಿಕೆಯಾಗುತ್ತಿದೆ.

ಸೋಮವಾರಪೇಟೆ ತಾಲೂಕಿನ ಆರು ಹೋಬಳಿ, 298 ಗ್ರಾಮಗಳ ಜನರು ಕಂದಾಯ, ಆಹಾರ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಕೆಲಸ ಕಾರ್ಯಗಳಿಗೆ ಮಿನಿ ವಿಧಾನಸೌಧಕ್ಕೆ ಬರುತ್ತಾರೆ. ಸಂತೆ ದಿನವಾದ ಸೋಮವಾರ ನೂರಾರು ಮಂದಿ ಕಟ್ಟಡದೊಳಗೆ ಇರುತ್ತಾರೆ. ಕಳೆದ ಏಳೆಂಟು ವರ್ಷಗಳಿಂದ ಕಟ್ಟಡ ಸೋರುತ್ತಿದ್ದು, ಗೋಡೆಗಳು ಶಿಥಿಲಗೊಂಡಿರುವ ಹಿನ್ನೆಲೆ ಇಡೀ ಕಟ್ಟಡ ಕುಸಿಯುವ ಆತಂಕವೂ ಎದುರಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಕಟ್ಟಡ ದುರಸ್ತಿಗೆ ಅನುದಾನ ಕೋರಿ ಸರ್ಕಾರಕ್ಕೆ ನಿರಂತರವಾಗಿ ಪತ್ರ ಬರೆಯಲಾಗುತ್ತಿದೆ. ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರುಗಳಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್ ಈಗಿನ ಸಚಿವರಾದ ಎಂ.ಆರ್.ಸೀತಾರಾಮ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಸೋಮವಾರಪೇಟೆಗೆ ಆಗಮಿಸಿದ್ದ ಸಂದರ್ಭ ಕಂದಾಯ ಇಲಾಖಾ ಸಚಿವ ಕಾಗೋಡು ತಿಮ್ಮಪ್ಪ, ಸಚಿವ ಯು.ಟಿ.ಖಾದರ್ ಅವರಿಗೂ ಮನವಿ ಮಾಡಿಕೊಂಡಿದ್ದರೂ ಇದುವರೆಗೂ ಕಟ್ಟಡ ದುರಸ್ತಿಗೆ ಅನುದಾನ ಸಿಕ್ಕಿಲ್ಲ ಎಂದು ಅಧಿಕಾರಿಗಳು ಅಳಲುತೋಡಿಕೊಂಡಿದ್ದಾರೆ.

ಪಟ್ಟಣದ ಎತ್ತರ ಪ್ರದೇಶದಲ್ಲಿರುವ ಮಿನಿ ವಿಧಾನ ಸೌಧವನ್ನು ಗಾಳಿ ಮಳೆಯಿಂದ ರಕ್ಷಿಸಿಕೊಳ್ಳುವದೇ ಕಷ್ಟಕರವಾಗಿದೆ. ಗಾಳಿ-ಮಳೆಯಿಂದ ರಕ್ಷಣೆ ಪಡೆಯಲು ಕಿಟಕಿಗಳಿಗೆ ಪ್ಲಾಸ್ಟಿಕ್ ಅಳವಡಿಸಲಾಗಿದೆ. ಜೋರಾದ ಗಾಳಿಗೆ ಪ್ಲಾಸ್ಟಿಕ್ ಹರಿದು ಆಡಳಿತ ಸೌಧವೇ ನಾಚಿಕೆಪಟ್ಟುಕೊಳ್ಳುವಂತೆ ಮಾಡುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಶಾಸಕರ ಸೂಚನೆಯಂತೆ ಮಿನಿವಿಧಾನಸೌಧ ಕಟ್ಟಡ ದುರಸ್ತಿಗೆ 25ಲಕ್ಷ ರೂ.ಗಳ ಅಂದಾಜು ಪಟ್ಟಿ ಯನ್ನು ತಯಾರಿಸಿ, ತಹಶೀಲ್ದಾರರಿಗೆ ಸಲ್ಲಿಸಲಾಗಿದೆ. ಪಿಲ್ಲರ್‍ಗಳನ್ನು ಎತ್ತರಿಸಿ ಗೋಡೆ ನಿರ್ಮಿಸಿ, ಶೀಟ್‍ಗಳನ್ನು ಅಳವಡಿಸಿದರೆ ಕಟ್ಟಡ ಸೋರುವದು ನಿಲ್ಲುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಅಭಿಯಂತರರು ತಿಳಿಸಿದ್ದು, ಈ ಬಗ್ಗೆ ಕ್ರಮ ಜರುಗಿದಂತೆ ಕಾಣುತ್ತಿಲ್ಲ. ಒಟ್ಟಿನಲ್ಲಿ ತಾಲೂಕು ಕಚೇರಿ ಕಟ್ಟಡ ದುರಸ್ತಿಗೆ ಕೂಡಲೆ ಸರ್ಕಾರ ಹಣ ಬಿಡುಗಡೆಗೊಳಿಸಬೇಕು ಎಂಬದು ಸಾರ್ವಜನಿಕರ ಆಗ್ರಹವಾಗಿದೆ.

ಆಡಳಿತಕ್ಕೂ ಬೇಕಿದೆ ಸರ್ಜರಿ: ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಕಚೇರಿಯಲ್ಲಿ ಹಲವಷ್ಟು ಮಂದಿಯನ್ನು ಕಾನೂನು ವ್ಯಾಪ್ತಿ ಮೀರಿ ನೇಮಿಸಿಕೊಂಡಿದ್ದು, ಅವರುಗಳಿಗೆ ಸರ್ಕಾರದಿಂದ ನಿಯೋಜಿತವಾಗಿರುವ ಅಧಿಕಾರಿಗಳೇ ಸಂಬಳ ನೀಡಬೇಕಿದೆ. ಇಂತಹ ಅನಿವಾರ್ಯತೆಗೆ ಒಳಗಾಗಿ ಭ್ರಷ್ಟಾಚಾರಕ್ಕೆ ಮುಂದಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಅಕ್ರಮ ಸಕ್ರಮ ಅಡಿಯಲ್ಲಿ ಅರ್ಜಿಗಳ ವಿಲೇವಾರಿಗೂ ಸಾವಿರಾರು ರೂಪಾಯಿ ಕೇಳುತ್ತಿರುವ ಬಗ್ಗೆ ದೂರುಗಳು ವ್ಯಕ್ತವಾಗುತ್ತಿವೆ. ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳ ಹಣ ಫಲಾನುಭವಿಗಳಿಗೆ ತಲುಪಿಸಲೂ ಸಹ ಕಾಂಚಾಣಕ್ಕೆ ಕೈಚಾಚಲಾಗುತ್ತಿದೆ. ಕಚೇರಿಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾ ಹಲವಷ್ಟು ದಿನ ನಿದ್ರೆಗೆ ಜಾರಿರುತ್ತದೆ. ತಹಶೀಲ್ದಾರ್ ಅವರು ಆಡಳಿತಯಂತ್ರವನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ “ಸರ್ಕಾರದ ಕೆಲಸ ದೇವರ ಕೆಲಸ” ಎಂಬದನ್ನು ಮನವರಿಕೆ ಮಾಡಿಕೊಡಬೇಕಿದೆ ಎಂದು ಸಾರ್ವಜನಿಕರು ‘ಶಕ್ತಿ’ ಮೂಲಕ ಸಲಹೆ ನೀಡಿದ್ದಾರೆ.

- ವಿಜಯ್ ಹಾನಗಲ್