ಮಡಿಕೇರಿ, ಅ. 23: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರ ಹೊಮ್ಮಲು ಎನ್.ಎಸ್.ಎಸ್. ಸೂಕ್ತ ವೇದಿಕೆ ಎಂದು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಚಾರ್ಯ ಪ್ರೊ. ಪಟ್ಟಡ ಪೂವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಲಿಬೆಟ್ಟದ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಂತ್ರಗಳ ಗುಲಾಮರಾಗದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜ ಸೇವೆಯಲ್ಲಿ ಸಾಧನೆಯನ್ನು ಮಾಡಿದ ನಾಯಕರುಗಳನ್ನು ಮಾದರಿ ಯನ್ನಾಗಿಟ್ಟುಕೊಳ್ಳಬೇಕು. ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ ಎದೆಗುಂದದೆ ಸಮಸ್ಯೆಯನ್ನು ಎದುರಿಸಿ ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕರು ಕೊಡಗು ಶಿಕ್ಷಣ ನಿಧಿಯ ಅಧ್ಯಕ್ಷ ಕೆ.ಪಿ. ಉತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ವಿದ್ಯಾರ್ಥಿಗಳು ಯೋಗ, ಕರಾಟೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಸಮಯ ಪ್ರಜ್ಞೆ, ಸ್ವಯಂ ಶಿಸ್ತು, ಸೇವಾ ಮನೋಭಾವನೆಯನ್ನು ತಿಳಿದು ಕೊಂಡರು. ಶಿಬಿರಾರ್ಥಿಗಳಿಂದ ತಿರುವಾದಿರ ನೃತ್ಯ ಹಾಗೂ ಕನ್ನಡ ನಾಡಿನ ನೃತ್ಯ, ಸಾರ್ವಜನಿಕರಿಂದ ಉರುಟಿಕೊಟ್ಟ್ ನೃತ್ಯವನ್ನು ಪ್ರದರ್ಶಿಸಲಾಯಿತು. ಶಿಬಿರದ ಅವಧಿಯಲ್ಲಿ ಶಿಬಿರಾರ್ಥಿ ಗಳು ಸಿದ್ದಾಪುರದ ರಸ್ತೆಗಳನ್ನು ಹಾಗೂ ಸರಕಾರಿ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಎಂ. ಭವಾನಿ ವಹಿಸಿದ್ದರು. ಸಮಾರಂಭದಲ್ಲಿ ಮೂಕೊಂಡ ವಿಜು ಸುಬ್ರಮಣಿ, ಅಜಿತ್ ಕರುಂಬಯ್ಯ, ಸ್ವಪ್ನ ಸುಬ್ಬಯ್ಯ, ಎನ್.ಎಂ. ನಾಣಯ್ಯ, ಕೆ.ಕೆ. ಶ್ರೀನಿವಾಸ್, ಹೆಚ್. ನರಸಿಂಹ, ರವಿಪ್ರಸಾದ್ ಭಾಗವಹಿಸಿದ್ದರು. ಶಿವದಾಸ್ ಸ್ವಾಗತಿಸಿ, ಸೌಮ್ಯ ವಂದಿಸಿದರು.