ಸೋಮವಾರಪೇಟೆ, ಅ. 24: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಅಂಗನವಾಡಿಯಲ್ಲಿ ಮಕ್ಕಳಿಗೆ ಅಡುಗೆ ತಯಾರಿಸುತ್ತಿದ್ದ ಸಂದರ್ಭ ಕುಕ್ಕರ್ ಸ್ಫೋಟಗೊಂಡ ಘಟನೆ ನಡೆದಿದ್ದು, ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಪತ್ರಕರ್ತರೋರ್ವರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ.ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಹಿರಿಕರ ಗ್ರಾಮದ ಅಂಗನವಾಡಿ ಸಹಾಯಕಿ ಗ್ಯಾಸ್ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಆಡುಗೆ ತಯಾರಿಸುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಕುಕ್ಕರ್ ಸಿಡಿದಿದೆ. ಭಯಗೊಂಡ ಸಹಾಯಕಿ ಮಕ್ಕಳನ್ನು ಅಂಗನವಾಡಿಯಿಂದ ಹೊರಗೆ ಕಳುಹಿಸಿ, ಅಡುಗೆ ಕೋಣೆಯ ಬಾಗಿಲು ಭದ್ರಪಡಿಸಿ ಹೊರ ಬಂದಿದ್ದಾರೆ. ಈ ಸಂದರ್ಭ ಇದೇ ಮಾರ್ಗವಾಗಿ ತೆರಳುತ್ತಿದ್ದ ಪತ್ರಕರ್ತ ಹಿರಿಕರ ರವಿ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ತೆರಳಿದ ರವಿ ಅವರು, ಅಂಗನವಾಡಿಯ ಹೊರಭಾಗದಲ್ಲಿದ್ದ ಮಕ್ಕಳನ್ನು ಪಕ್ಕದಲ್ಲಿಯೇ ಇದ್ದ ಪ್ರಾಥಮಿಕ ಶಾಲೆಗೆ ಕಳುಹಿಸಿ, ಶಾಲೆಯಲ್ಲಿದ್ದ ಫೈರ್ ಎಕ್ಸ್‍ಟಿಂಗ್ವಿಷರ್(ಬೆಂಕಿನಂದಕ)ವನ್ನು ತೆಗೆದುಕೊಂಡು ಅಂಗನವಾಡಿಯ ಅಡುಗೆ ಕೊಠಡಿಯಲ್ಲಿ ಹರಡುವ ಸ್ಥಿತಿಯಲ್ಲಿದ್ದ ಬೆಂಕಿಗೆ ಸಿಂಪಡಿಸಿ ನಂದಿಸಿದ್ದಾರೆ. ಸ್ಥಳೀಯರಾದ ದರ್ಶನ್ ರಾಜಪ್ಪ ಹಾಗು ಕೀರ್ತಿ ಮುತ್ತಣ್ಣ ಅವರುಗಳೂ ಆಗಮಿಸಿ ಬೆಂಕಿ ನಂದಿಸಲು ಸಹಕಾರ ನೀಡುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪ್ರತ್ಯೇಕ ಅಡುಗೆ ಕೊಠಡಿಗಳನ್ನು ನಿರ್ಮಾಣ ಮಾಡಬೇಕು. ಅಂಗನವಾಡಿಗಳಿಗೆ ಕಡ್ಡಾಯವಾಗಿ ಬೆಂಕಿನಂದಕಗಳನ್ನು ಸರಬರಾಜು ಮಾಡಬೇಕು. ಅಲ್ಲದೆ ಅಂಗನವಾಡಿ ಸಿಬ್ಬಂದಿಗಳಿಗೆ ಬೆಂಕಿ ಆರಿಸುವ ಬಗ್ಗೆ ತರಬೇತಿ ನೀಡಬೇಕು ಎಂದು ಕೀರ್ತಿ ಮತ್ತು ದರ್ಶನ್ ಅಭಿಪ್ರಾಯಿಸಿದ್ದಾರೆ.