ಕುಶಾಲನಗರ, ಅ. 24: ಆಸಕ್ತಿಯುಳ್ಳ ನಿವೃತ್ತ ಅಧಿಕಾರಿಗಳು ತಮ್ಮ ಅನುಭವವನ್ನು ಧಾರೆ ಎರೆಯುವ ಅವಕಾಶ ಕಲ್ಪಿಸಿದಲ್ಲಿ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವೇರಿ ನಿಸರ್ಗಧಾಮದಲ್ಲಿ ನಡೆದ ಅರಣ್ಯ ಇಲಾಖೆಯ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ಪ್ರಸಕ್ತ ಇಲಾಖೆಯಲ್ಲಿ ಅವಕಾಶಗಳಿದ್ದು ಈ ಸೇವೆಗೆ ಗೌರವಧನ ಲಭಿಸಲಿದೆ. ಇದರೊಂದಿಗೆ ಇಲಾಖೆಯಲ್ಲಿರುವ ಕಿರಿಯ ನೌಕರರಿಗೆ ಸಾಕಷ್ಟು ಅನುಭವ ಒದಗಲಿದೆ. ನಿವೃತ್ತಿ ಹೊಂದಿದವರಿಗೆ ಸರಕಾರದಿಂದ ಲಭಿಸುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘ ಶ್ರಮಿಸಬೇಕಿದೆ ಎಂದರು.

ಸಂಘದ ಅಧ್ಯಕ್ಷರಾದ ಮಂಡೇಪಂಡ ಬೋಸ್ ಮೊಣ್ಣಪ್ಪ ಮಾತನಾಡಿ, ನಿವೃತ್ತ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು ತಮ್ಮ ಸೇವಾ ಅವಧಿ ಬಳಿಕವೂ ಕೂಡ ಪರೋಕ್ಷವಾಗಿ ಅರಣ್ಯ ಇಲಾಖೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಅರಣ್ಯ ವಿರೋಧಿ ಚಟುವಟಿಕೆಗಳು ಕಂಡುಬಂದಲ್ಲಿ ಸಕಾಲದಲ್ಲಿ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬಹುದಾಗಿದೆ ಎಂದರು.

ಸಭೆಯಲ್ಲಿ ಮಡಿದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಘದ ಹಿಂದಿನ ವರ್ಷದ ವರದಿ ವಾಚನ ನಡೆಯಿತು.

ಸಂಘದ ಗೌರವಾಧ್ಯಕ್ಷ ಕೆ.ಕೆ.ಲಕ್ಷ್ಮಣ, ಕಾರ್ಯದರ್ಶಿ ಕೆ.ಪಿ.ಸೋಮಣ್ಣ, ಸಂಘದ ನಿರ್ದೇಶಕರು ಇದ್ದರು.