ಗೋಣಿಕೊಪ್ಪಲು, ಅ. 24: ಭತ್ತ ಬೆಳೆಯನ್ನು ವ್ಯಾಪಾರಿಕರಣದ ದೃಷ್ಟಿಯಿಂದ ಕಾಣದೆ ಆಹಾರ ಪದಾರ್ಥಗಳ ಮುಖ್ಯ ಬೆಳೆ ಎಂಬ ದೃಷ್ಟಿಕೋನದಿಂದ ಬೆಳೆಯುವ ಅನಿವಾರ್ಯತೆ ಇದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ವೀರೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ಕುಂದ - ಈಚೂರು ಗ್ರಾಮದ ಮದ್ರಿರ ಕುಟುಂಬ ಐನ್‍ಮನೆಯಲ್ಲಿ ಕೃಷಿ ಇಲಾಖೆಯ ವತಿಯಿಂದ ನಡೆದ ರೈತ ಕ್ಷೇತ್ರಪಾಠ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭತ್ತದ ಕೃಷಿಯನ್ನು ಕೇವಲ ಇಳುವರಿ, ಲಾಭಾಂಶದಲ್ಲಿ ನೋಡುವ ಮನೋಭಾವನೆಯನ್ನು ಕೈ ಬಿಡಬೇಕಾಗಿದೆ. ಭತ್ತದ ಕೃಷಿ ಮಾಡುವದರಿಂದ 5-6 ತಿಂಗಳುಗಳ ಕಾಲ ಗದ್ದೆಯಲ್ಲಿ ನೀರು ಇಂಗುವದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿರುವ ಕಾಫಿ, ಕಾಳುಮೆಣಸು ಹಾಗೂ ಇತರ ಬೆಳೆಗಳಿಗೆ ನೀರುಣಿಸಲು ಮತ್ತು ಕುಡಿಯುವ ನೀರಿನ ಮಟ್ಟ ಹೆಚ್ಚಿಸಲು ಸಾಧ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಆಹಾರ ಬೆಳೆಯಾಗಿ ಭತ್ತದ ಕೃಷಿ ಮಾಡಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿ ಕಡಿಮೆಯಾದ ಪರಿಣಾಮ ಮಳೆ ಕಡಿಮೆಯಾದಂತೆ ಕಾಫಿ, ಕಾಳುಮೆಣಸು ಬೆಳೆಗಳು ಒಣಗುವ ಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ಭತ್ತದ ಕೃಷಿ ಹೊರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಇಳುವರಿ ಕಡಿಮೆ ಇದೆ. ಆದರೆ, ವೈಜ್ಞಾನಿಕ ರೀತಿಯ ಕೃಷಿ ಪದ್ಧತಿಯನ್ನು ಅನುಸರಿಸಿದರೆ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯ ಎಂದರು.

ಭೂಚೇತನ ಯೋಜನೆಯ ತಾಂತ್ರಿಕ ಅಧಿಕಾರಿ ಮಂಜುನಾಥ್ ಮಾತನಾಡಿ, ಭತ್ತದ ಕೃಷಿಯಲ್ಲಿ ಬಿತ್ತನೆಯಿಂದ ಕಟಾವಿನವರೆಗೆ ಹತ್ತು ಹಂತಗಳ ಕಾರ್ಯಕ್ರಮವನ್ನು ಇಲಾಖೆ ವತಿಯಿಂದ ನಡೆಸಲಾಗುತ್ತದೆ ಎಂದರು.

ಮಾದರಿ ಕೃಷಿಕ ಮದ್ರಿರ ರಶ್ಮಿ ಮಾತನಾಡಿ, 9 ಎಕರೆ ಭತ್ತದ ಗದ್ದೆಯನ್ನು ಯಾಂತ್ರೀಕೃತವಾಗಿ ಮಾಡಲಾಗಿದ್ದು, 15 ಸಾವಿರ ರೂ.ಗಳು ಖರ್ಚಾಗಿದೆ. ಕಾರ್ಮಿಕರ ಮೂಲಕ ಮಾಡುವ ಭತ್ತದ ಕೃಷಿಗೂ ಯಾಂತ್ರೀಕೃತ ಕೃಷಿಗೂ ಸಾಕಷ್ಟು ವ್ಯಾತ್ಯಾಸವನ್ನು ಕಂಡಿದ್ದೇವೆ ಎಂದರು.

ಈ ಸಂದರ್ಭ ಪೊನ್ನಂಪೇಟೆ ಕೃಷಿ ಇಲಾಖೆ ಅಧಿಕಾರಿ ಮುರುವಂಡ ಲಿಖಿತ ಉಪಸ್ಥಿತರಿದ್ದರು.