ಗೋಣಿಕೊಪ್ಪಲು, ಅ. 24: ಮೌಂಟ್ ಎವರೆಸ್ಟ್ ಏರುವದು ನನ್ನ ಕನಸು. ಹಾಗಂತ ಅದು ಸುಲಭದ ಮಾತಲ್ಲ. ನಿರಂತರ ಹಿಮಪಾತದಿಂದ ಹೆಜ್ಜೆ ಹೆಜ್ಜೆಗೂ ಅಪಾಯವಿದೆ. ಈ ಬಾರಿ ಡಿಯೋ ತಿಬ್ಬ ಏರುವ ಸಂದರ್ಭ ಸುಮಾರು 200 ಅಡಿ ಆಳದ ಕಂದಕಕ್ಕೆ ಜಾರಿ ಬಿದ್ದಿದ್ದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವಾದೆ. ಆದರೆ, ಇದೀಗ ನಾನು ಹಿಮಾಲಯ ಮೈನಸ್ 10 ಡಿಗ್ರಿ ಚಳಿಗೆ ಹೊಂದಿಕೊಂಡಿದ್ದೇನೆ. ಮೇಲೆ ಮೇಲೆ ಹೋಗುತ್ತಿದ್ದಂತೆ ಆಮ್ಲಜನಕದ ಕೊರತೆಯೊಂದಿಗೆ ಉಸಿರಾಟದ ತೊಂದರೆಯೂ ಕಾಡಬಹುದು. ಈ ನಿಟ್ಟಿನಲ್ಲಿ ಮತ್ತಷ್ಟು ತರಬೇತಿ ಹೊಂದಿ ಎವರೆಸ್ಟ್ ತುತ್ತತುದಿಗೆ ಏರುತ್ತೇನೆ. ಹಾಗೇ ಸಾಧನೆ ಮಾಡಿದ್ದಲ್ಲಿ ಅತೀ ಚಿಕ್ಕವಯಸ್ಸಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಗುಂಪಿನಲ್ಲಿ ವಿಶ್ವಕ್ಕೇ ತಾನು ಮೊದಲಿಗನಾಗುತ್ತೇನೆ. ಗಿನ್ನಿಸ್ ರೆಕಾರ್ಡ್ ಸಾಧನೆ ಆಗುತ್ತದೆ ಎಂದು 19 ವರ್ಷ ಪ್ರಾಯದ ತಿತಿಮತಿ ನಿವಾಸಿ, ಇಲ್ಲಿನ ಕಾವೇರಿ ಕಾಲೇಜು ಪಿಯುಸಿ ವಿದ್ಯಾರ್ಥಿ ವೈ.ವಿ. ಸಂಜೀತ್ ತಿಳಿಸಿದ್ದಾನೆ.

ಹಿಮಾಲಯದ ಮನಾಲಿಯಿಂದ ಸುಮಾರು 19,683 ಅಡಿ ಎತ್ತರ ಡಿಯೋ ತಿಬ್ಬ ಏರಿ ವಾಪಾಸ್ಸಾದ ವಿದ್ಯಾರ್ಥಿಯನ್ನು ಗೋಣಿಕೊಪ್ಪಲು ಕಾವೇರಿ ಕಾಲೇಜು ಪಿ.ಯು.ವಿಭಾಗದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಆತ್ಮೀಯ ವಾಗಿ ಬರಮಾಡಿಕೊಂಡ ಸಂದರ್ಭ ಸಂಜಿತ್ ‘ಶಕ್ತಿ’ಯೊಂದಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಪ್ರಾಥಮಿಕ ಹಂತದಲ್ಲಿ ಪಶ್ಚಿಮ ಬಂಗಾಳದ ದಾರ್ಜಿಲಿಂಗ್‍ನ 17000 ಅಡಿ ಎತ್ತರದ ಸಾಂಗ್ರಿ ಬೆಟ್ಟವನ್ನು ಮೇ. ತಿಂಗಳಿನಲ್ಲಿ ಏರಲಾಯಿತು. ಸೆ.17 ರಿಂದ ಅ.17 ರವರೆಗೆ ತರಬೇತಿ ಹೊಂದಿ ಒಂದೇ ದಿನದಲ್ಲಿ ಡಿಯೋ ತಿಬ್ಬವನ್ನು ಏರಿರುವದರಿಂದ ಆತ್ಮವಿಶ್ವಾಸ ಹೆಚ್ಚಿದೆ. ಇನ್ನೂ 10,000 ಅಡಿ ಏರಿದ್ದಲ್ಲಿ ಮೌಂಟ್ ಎವರೆಸ್ಟ್ ಹತ್ತಿದ ಸಾಧನೆ ಮಾಡಬಹುದು. ಈ ಹಂತದಲ್ಲಿ ಮೂರು ಬೇಸ್ ಕ್ಯಾಂಪ್ ಇದೆ. ಟೆಂಟಾ ಬೇಸ್ ಕ್ಯಾಂಪ್‍ನಲ್ಲಿ 12,900 ಅಡಿ ಎತ್ತರದಲ್ಲಿದ್ದಾಗ ಕ್ರಾಂಪನ್ ಹಾಗೂ ಗ್ರೇಟರ್‍ಗೆ ಕಾಲು ಸಿಕ್ಕಿ 200 ಅಡಿ ಆಳಕ್ಕೆ ಬೀಳ ಬೇಕಾಯಿತು. ನಂತರ ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ಹೊಂದಿ ಮುಂದುವರಿಯಬೇಕಾಯಿತು ಎಂದು ಸಂಜಿತ್ ಮಾಹಿತಿ ನೀಡಿದನು.

ಇದೇ ಸಂದರ್ಭ ಮಾತನಾಡಿದ ಚೆನ್ನಯ್ಯನಕೋಟೆ ಗ್ರಾ.ಪಂ.ಸದಸ್ಯ ಹಾಗೂ ಗಿರಿಜನ ಮುಖಂಡ ಹೆಚ್.ಎಸ್.ಗಣೇಶ್ ಐಟಿಡಿಪಿ ಇಲಾಖೆ ಕೊಡಗು ಜಿಲ್ಲೆಯ ಐವರು ಆದಿವಾಸಿ ಪರ್ವತಾರೋಹಿಗಳ ಜವಾಬ್ದಾರಿ ವಹಿಸಿಕೊಂಡಿದ್ದು, ಅಧಿಕಾರಿಗಳು ಕಳಪೆ ಗುಣಮಟ್ಟದ ಕಿಟ್ ನೀಡಿದ್ದಾರೆ. ಪರ್ವತಾ ರೋಹಿಗಳಿಗೆ ಗ್ಲೌಸ್, ಟ್ರಕ್ಕಿಂಗ್ ಶೂ, ಸನ್‍ಗ್ಲಾಸ್, ಶಾಕ್ಸ್, ಹೆಡ್ ಟಾರ್ಚ್, ಹ್ಯಾಂಡ್ ಟಾರ್ಚ್ ಇತ್ಯಾದಿ ಒಳಗೊಂಡಂತೆ ಗುಣಮಟ್ಟದ ಮೌಂಟೇನ್ ಕಿಟ್ ನೀಡಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವದು. ಮುಂದಿನ ಸಾಲಿನಲ್ಲಿ ಐವರು ಮೌಂಟ್ ಎವರೆಸ್ಟ್‍ಗೆ ತೆರಳಬೇಕಾಗಿರುವದರಿಂದ ಗುಣಮಟ್ಟದ ಕಿಟ್ ನೀಡಬೇಕಾಗಿದೆ ಎಂದು ಒತ್ತಾಯಿಸಿದರು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಟ್ರಕ್ಕಿಂಗ್ ಸಾಧನೆ ಯೊಂದಿಗೆ ವ್ಯಾಸಂಗದಲ್ಲಿಯೂ ಹೆಚ್ಚು ಅಂಕಗಳಿಸುವ ಅಗತ್ಯವಿದೆ. ಕೊಡಗು ಜಿಲ್ಲೆಯ 30 ವಿದ್ಯಾರ್ಥಿಗಳಲ್ಲಿ ಅಂತಿಮ ಐವರಲ್ಲಿ ನಮ್ಮ ಕಾಲೇಜಿನ ಸಂಜಿತ್ ಆಯ್ಕೆ ಆಗಿರುವದು ನಿಜಕ್ಕೂ ಹೆಮ್ಮೆಯ ವಿಚಾರ. ಈತನ ಸಾಧನೆಯ ನಿಟ್ಟಿನಲ್ಲಿ ಎಲ್ಲ ಪೂರಕ ಸಹಕಾರ ನೀಡಲಾಗುವದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕಿ ಎಂ.ಕೆ.ಪದ್ಮಾ, ಎನ್.ಸಿ.ಸಿ. ಕ್ಯಾಪ್ಟನ್ ಬ್ರೈಟಾ ಕುಮಾರ್, ಕಾಲೇಜಿನ ಉಪನ್ಯಾಸಕವರ್ಗ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಟಿ.ಎಲ್.ಶ್ರೀನಿವಾಸ್