ಕುಶಾಲನಗರ, ಅ. 24: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಟಿಬೇಟಿಯನ್ ರಸ್ತೆಯಲ್ಲಿರುವ ಹೋಟೆಲ್ ಒಂದರಿಂದ ಶೌಚಾಲಯದ ತ್ಯಾಜ್ಯಗಳನ್ನು ಲಾರಿ ಮೂಲಕ ಸಂಗ್ರಹಿಸಿ ಕಾವೇರಿ ನದಿಗೆ ಹರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯ್ತಿ ಜನಪ್ರತಿನಿಧಿಗಳು ಪೊಲೀಸ್ ದೂರು ನೀಡಿದ ಘಟನೆ ನಡೆದಿದೆ.

ಸೋಮವಾರ ರಾತ್ರಿ ವೇಳೆ ಸ್ಥಳೀಯ ಅರಮಾನ್ ಹೋಟೆಲ್‍ನ ಶೌಚಾಲಯದಿಂದ ಶೌಚ ವಿಲೇವಾರಿ ವಾಹನ (ಕೆಎ. 09.ಸಿ.6271) ಮೂಲಕ ತುಂಬಿ ನದಿಗೆ ಸೇರುವ ಕೊಲ್ಲಿ ಮೂಲಕ ಹರಿಸುತ್ತಿದ್ದ ಸಂದರ್ಭ ಸ್ಥಳೀಯ ಆಟೋ ಚಾಲಕ ಕಾಶಿ ಎಂಬವರಿಗೆ ಕಂಡುಬಂದಿದ್ದು ಈ ಸಂದರ್ಭ ಲಾರಿ ಸ್ಥಳದಿಂದ ಪಲಾಯನವಾಗಿರುವದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ಪಂಚಾಯಿತಿ ಪ್ರತಿನಿಧಿಗಳು ಮತ್ತು ಅಭಿವೃದ್ಧಿ ಅಧಿಕಾರಿ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸಂಬಂಧಿಸಿದ ವಾಹನ ವಶಪಡಿಸಿಕೊಂಡು ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಗ್ರಾಮಲೆಕ್ಕಿಗ ಪ್ರದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶವಂತ ಕುಮಾರ್, ಸದಸ್ಯರಾದ ಶಿವಪ್ರಕಾಶ್, ಮಂಜುನಾಥ್, ಲೋಹಿತಾಶ್ವ ಆಕ್ರೋಶ ವ್ಯಕ್ತಪಡಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಸಂಬಂಧಿಸಿದ ಹೊಟೇಲ್ ಮಾಲೀಕರ ಮೇಲೆ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದ್ದು ನದಿ ನೀರನ್ನು ಕಲುಸಿತ ಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡುವದಾಗಿ ತಿಳಿಸಿದ್ದಾರೆ.