ಮಡಿಕೇರಿ, ಅ. 24: ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು ವಿಷನ್-2025 ಡಾಕ್ಯುಮೆಂಟ್ ಹೆಸರಿನಲ್ಲಿ ನೀಲಿನಕ್ಷೆ ಮತ್ತು ಅನುಷ್ಠಾನ ಕಾರ್ಯ ಯೋಜನೆ ಸಿದ್ಧಪಡಿಸುತ್ತಿದ್ದು, ಆ ನಿಟ್ಟಿನಲ್ಲಿ ಇದೇ ತಾ. 31 ರಂದು ನಗರದ ಸಂತ ಜೋಸೆಫರ ಶಾಲೆಯಲ್ಲಿ ಕಾರ್ಯಾಗಾರ ನಡೆಯಲಿದ್ದು, ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಸಂಬಂಧಪಟ್ಟ ವಿವಿಧ ಹಂತದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕೃಷಿ, ಮೂಲ ಸೌಕರ್ಯ, ಉದ್ಯೋಗ ಮತ್ತು ಕೌಶಲ್ಯ, ಕೈಗಾರಿಕಾಭಿವೃದ್ಧಿ, ಸಾಮಾಜಿಕ ಮತ್ತು ಸಬಲೀಕರಣ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಮಾಹಿತಿ ಮತ್ತು ಸಂಪರ್ಕ ಸೇವೆಗಳು, ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಹೀಗೆ 13 ವಿಷಯಗಳನ್ನು ಒಳಗೊಂಡಂತೆ 5 ಗುಂಪುಗಳನ್ನು ರಚಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿನ ಪರಿಣಿತರನ್ನು ಗುರುತಿಸಿ ಅವರಿಂದ ಮಾಹಿತಿ, ಅಭಿಪ್ರಾಯ ಪಡೆಯುವದರ ಜೊತೆಗೆ ವಿಚಾರ ಮಂಡಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಎಂ. ಸತೀಶ್ ಕುಮಾರ್ ಅವರು ಸಲಹೆ ಮಾಡಿದರು.

ನೋಡೆಲ್ ಅಧಿಕಾರಿ ಕೆ.ವಿ. ಸುರೇಶ್ ಮಾತನಾಡಿ, ನವ ಕರ್ನಾಟಕ ವಿಷನ್-2025 ಸಂಬಂಧ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಯಾವ ರೀತಿ ಮಾಹಿತಿ ಸಂಗ್ರಹಿಸಬಹುದು. ಈ ಸಂಬಂಧ ಸಮಗ್ರ ಅಭಿವೃದ್ಧಿಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಅವರು ವಿವರಿಸಿದರು.

ಮತ್ತೊಬ್ಬ ನೋಡೆಲ್ ಅಧಿಕಾರಿ ಸಿ. ಜಗನ್ನಾಥ ಅವರು ವಿಷನ್-2025 ಡಾಕ್ಯುಮೆಂಟ್ ಸಿದ್ಧಪಡಿಸುವ ಸಂಬಂಧ ಈಗಾಗಲೇ ಮಾಡರೇಟ್‍ಗಳು, ಜೊತೆಗೆ ಮುಖ್ಯಾಂಶಗಳನ್ನು ದಾಖಲಿಸಿಕೊಳ್ಳಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಾಡರೇಟರ್‍ಗಳು ತಮ್ಮ ಗುಂಪಿನ ಸದಸ್ಯರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕಿದೆ. ಜೊತೆಗೆ ಸದಸ್ಯರೊಂದಿಗೆ ಚರ್ಚಿಸಿ ತಾ. 26 ರೊಳಗೆ ತಯಾರಿ ಮಾಡಿಕೊಳ್ಳಬೇಕಿದೆ. ತಾ. 27 ರೊಳಗೆ ಮಾಡರೇಟರ್‍ಗಳು ಸಿದ್ಧಪಡಿಸಿರುವ ವರದಿ ಮಂಡಿಸಬೇಕಿದೆ. ತಾ. 31 ರಂದು ಕಾರ್ಯಾಗಾರದಲ್ಲಿ ಗುಂಪಿನ ಸದಸ್ಯರು ಭಾಗವಹಿಸಲು ಖಾತರಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಜಿ.ಪಂ. ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ, ಕೃಷಿ ಇಲಾಖೆಯ ಸಹಾಯಕ ಜಂಟಿ ನಿರ್ದೇಶಕ ಕೆ. ರಾಮಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಎಂ. ದಾನೋಜಿ, ರಾಷ್ಟ್ರೀಯ ಮಾಹಿತಿ ಕೇಂದ್ರದ ಅಜಿತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಿವಕುಮಾರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕ ಶಬೀರ್ ಭಾಷಾ, ಕೃಷಿ ಇಲಾಖೆಯ ಉಪ ನಿರ್ದೇಶಕ ಕೆ. ರಾಜು, ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಎಂ. ಸದಾಶಿವಪ್ಪ, ಕೆ.ಎಸ್.ಆರ್.ಟಿ. ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ, ಪಿಡಬ್ಲ್ಯುಡಿ ಇಂಜಿನಿಯರ್ ನಟೇಶ್, ಪ್ರಭು, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ನಗರಸಭೆ ಪೌರಾಯುಕ್ತೆ ಬಿ. ಶುಭ ಇತರರು ಇದ್ದರು.