ಸುಂಟಿಕೊಪ್ಪ, ಅ. 24: ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ನರೇಂದ್ರ ಮೋದಿಯವರ ಮೂರೂವರೆ ವರ್ಷಗಳ ಸಾಧನೆ ಹಾಗೂ ಆಡಳಿತದ ಬಗ್ಗೆ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಫಲ್ಯದ ಬಗ್ಗೆ ಜನಜಾಗೃತಿ ಆಂದೋಲನ ಕಾರ್ಯಕ್ರಮ ನಡೆಯಿತು.

ಸೋಮವಾರಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಅವರು ಮಾತನಾಡಿ, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ, ಪ್ರತಿ ಬಡಜನರ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ ಉಚಿತವಾಗಿ ಗ್ಯಾಸ್ ಸಿಲಿಂಡರ್ ಅನ್ನು ವಿತರಿಸುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಎರಡನೇ ಹಂತದ ಗ್ಯಾಸ್ ಸಿಲಿಂಡರನ್ನು ವಿತರಿಸಲಾಗುತ್ತದೆ ಎಂದರು. ಕೊಡಗಿನ ಮೇಲೆ ಹಲವು ಬಾರಿ ಧಾಳಿ ಮಾಡಿದ ಕಳಂಕ ಹೊಂದಿರುವ ಟಿಪ್ಪುವನ್ನು ವೈಭವೀಕರಿಸುವದು ಎಷ್ಟು ಸರಿ. ಕೊಡಗಿನ ಹಲವಾರು ದೇವಾಲಯಗಳನ್ನು ದ್ವಂಸ ಗೊಳಿಸಿರುವದು ಸಾಧನೆಯೇ ಎಂದು ಪ್ರಶ್ನಿಸಿದರಲ್ಲದೇ, ಒಂದು ವೇಳೆ ಟಿಪ್ಪು ಜಯಂತಿ ಮಾಡಿದ್ದೇ ಆದರೆ ಅದು ಸಿದ್ದರಾಮಯ್ಯ ಅವರ ಕೊನೆಯ ಜಯಂತಿಯಾಗಲಿದೆ ಎಂದು ಕಿಡಿಕಾರಿದರು.

ವೀರಾಜಪೇಟೆ ತಾಲೂಕು ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಬಿಜೆಪಿ ಪಕ್ಷ ಯಾವದೇ ಜಾತಿ, ಧರ್ಮ, ಅಪ್ಪ-ಮಕ್ಕಳ ಪಕ್ಷವಾಗಿರದೇ ಇದೊಂದು ಎಲ್ಲ ವರ್ಗದ ಸಂಘಟಿತ ಮತ್ತು ಕಾರ್ಯಕರ್ತರ ಪಕ್ಷವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಕರ್ನಾಟಕ ಮುಕ್ತ ಕಾಂಗ್ರೆಸ್ ಮಾಡಬೇಕೆಂದು ಮನವಿ ಮಾಡಿಕೊಂಡರು. ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಉಜ್ವಲಗೊಳಿಸುವ ದೃಷ್ಟಿಯಿಂದ ಭೀಮಾ ಯೋಜನೆಯಂತಹ ಯೋಜನೆಗಳನ್ನು ಜಾರಿಗೊಳಿಸಿ ಜನಸಾಮಾನ್ಯರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಆದರೆ ಅಂತಹ ಯಾವದೇ ಜನಪರ ಕೆಲಸವನ್ನು ಮಾಡದೇ “ಭಾಗ್ಯ” ಯೋಜನೆಯ ಹೆಸರಿನಲ್ಲಿ ನಾಟಕೀಯ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಲು ಎಲ್ಲರೂ ಕಂಕಣ ಬದ್ಧರಾಗೋಣ ಎಂದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯ ಸರ್ಕಾರ ರೂ. 50 ಕೋಟಿ ಅನುದಾನ ನೀಡುವದಾಗಿ ಭರವಸೆ ನೀಡಿ ಮೋಸ ಮಾಡುತ್ತಿದೆ ಎಂದರು. ಇದೇ ಸಂದರ್ಭ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸುಂಟಿಕೊಪ್ಪದ ಇಂಡೇನ್ ಗ್ಯಾಸ್ ಸರ್ವೀಸ್ ವತಿಯಿಂದ 28 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ವಹಿಸಿದ್ದರು. ಹಿರಿಯ ಮುಖಂಡ ವೈ.ಯಂ. ಕರುಂಬಯ್ಯ, ಸೋಮವಾರಪೇಟೆ ತಾಲೂಕು ಕ್ಷೇತ್ರ ಸಮಿತಿ ಅಧ್ಯಕ್ಷ ಕುಮಾರಪ್ಪ, ತಾಲೂಕು ಕಾರ್ಯದರ್ಶಿ ಮೋಹನ್ ದಾಸ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಹೇಶ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಇಂಡೇನ್ ಗ್ಯಾಸ್ ವಿತರಕಿ ಚೈತ್ರ ಭಾರತೀಶ್, ಆರ್‍ಎಂಸಿ ಅಧ್ಯಕ್ಷ ಸತೀಶ್, ಸೋಮವಾರಪೇಟೆ ನಗರ ಸ್ಥಾನೀಯ ಸಮಿತಿ ಅಧ್ಯಕ್ಷ ಸೋಮೇಶ್ ಇತರರು ಇದ್ದರು.

ಸುಂಟಿಕೊಪ್ಪ ಬಿಜೆಪಿ ನಗರ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ ಸ್ವಾಗತಿಸಿ, ನಿರೂಪಿಸಿದರೆ, ಪಿ.ಆರ್. ಸುನಿಲ್ ಕುಮಾರ್ ವಂದಿಸಿದರು.