ಕೂಡಿಗೆ, ಅ. 24: ಕೂಡುಮಂಗಳೂರು ಗ್ರಾಮ ವ್ಯಾಪ್ತಿಗಳಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಚಾಲನೆಗೊಂಡಿದೆ.

ಕರ್ನಾಟಕ ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅಭಿಯಾನಕ್ಕೆ ಚಾಲನೆ ನೀಡಿ, ನಂತರ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಹಾಗೂ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಐಎನ್‍ಟಿಯುಸಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆಯಿಂದ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆಗಳನ್ನು ತಿಳಿಸುವಲ್ಲಿ ಮುಂದಾಗಿದ್ದೇವೆ ಎಂದರು.

ನಂತರ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ, ವಿದ್ಯಾಸಿರಿ, ಸಾಮಾಜಿಕ ನ್ಯಾಯ, ಮೈತ್ರಿ, ಮನಸ್ವಿನಿ, ಗಂಗಾ ಕಲ್ಯಾಣ, ಎಸ್.ಸಿ. ಮತ್ತು ಎಸ್.ಟಿ. ಕಲ್ಯಾಣ, ರೈತರ ಕಲ್ಯಾಣ, ಸಾಲ ಹಾಗೂ ಬಡ್ಡಿ ಮನ್ನಾ, ಹೈದರಾಬಾದ್-ಕರ್ನಾಟಕ ಅಭಿವೃದ್ಧಿ, ಜಲಸಿರಿ, ವಿಶ್ವೇಶ್ವರಯ್ಯ ಜಲ ನಿಗಮ, ಸಣ್ಣ ನೀರಾವರಿ, ಕೃಷಿಭಾಗ್ಯ, ಕ್ಷೀರಭಾಗ್ಯ, ಇನ್ನಿತರ ಯೋಜನೆಗಳ ಬಗ್ಗೆ ಕರಪತ್ರದ ಮೂಲಕ ಗ್ರಾಮದ ಮನೆಮನೆಗಳಿಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ತೆರಳಿ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಲಾಗುತ್ತಿದೆ ಎಂದರು.

ಅಭಿಯಾನದಲ್ಲಿ ಕೊಡಗು ಜಿಲ್ಲಾ ಐಎನ್‍ಟಿಯುಸಿ ಅಧ್ಯಕ್ಷ ಟಿ.ಪಿ. ಹಮೀದ್, ಪ್ರಧಾನ ಕಾರ್ಯದರ್ಶಿ ಗೋವಿಂದ್ ರಾಜ್‍ದಾಸ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ, ತೊರೆನೂರು ಗ್ರಾ.ಪಂ. ಸದಸ್ಯರುಗಳಾದ ಕಿಶೋರ್ ಕುಮಾರ್, ತಾರಾ ಉದಯ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ, ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಗುಡ್ಡೆಹೊಸೂರು ಚಂದ್ರಶೇಖರ್, ಕೂಡ್ಲೂರು ಗ್ರಾಮದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ್‍ರಾಜ್ ಅರಸ್, ಐಎನ್‍ಟಿಯುಸಿ ಯುವ ಘಟಕದ ಮುಖಂಡ ತ್ರಿಣೇಶ್, ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಕೂಡುಮಂಗಳೂರು, ವಿಜಯನಗರ, ಸುಂದರನಗರ, ಬಸವನತ್ತೂರು ಗ್ರಾಮಗಳ ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚಿದರು.