ಕುಶಾಲನಗರ, ಅ. 23: ವಿದ್ಯಾರ್ಥಿಗಳು ಅರಣ್ಯ, ವನ್ಯ ಜೀವಿಗಳು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ದೊಡ್ಡ ಅಳುವಾರ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎ. ಮುರುಳಿಧರ್ ಹೇಳಿದರು.
ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾನಿಲಯಕ್ಕೆ ಸೇರಿದ ದೊಡ್ಡ ಅಳುವಾರದ ವನ್ಯಜೀವಿ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ‘ನಮ್ಮ ನಡಿಗೆ ವನ್ಯಜೀವಿಗಳ ಸಂರಕ್ಷಣೆ ಕಡೆಗೆ’ ಎಂಬ ಘೋಷಣೆಯಡಿ ಸಂಘಟಿಸಿದ್ದ 63 ನೇ ವಿಶ್ವ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಿದ ಅವರು, ಕಾಡಿನ ರಕ್ಷಣೆಯಿಂದ ಮಾತ್ರ ವನ್ಯಜೀವಿಗಳ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಸುಂಟಿಕೊಪ್ಪ ಇಕೋ-ಕ್ಲಬ್‍ನ ಸಂಚಾಲಕ, ಪರಿಸರ ಮಿತ್ರ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಮಾನವನ ಚಟುವಟಿಕೆ ಗಳಿಂದ ಪರಿಸರದ ಮೇಲಾಗುತ್ತಿರುವ ನಷ್ಟವನ್ನು ತಪ್ಪಿಸಬೇಕಿದೆ. ಪ್ರತಿಯೊಬ್ಬರೂ ನೀರು, ಅರಣ್ಯ, ವನ್ಯ ಜೀವಿಗಳು ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕಿದೆ ಎಂದರು.
ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ದಿವ್ಯ, ತಂತ್ರಜ್ಞ ಎನ್.ಟಿ. ಪ್ರಶಾಂತ್, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಸಂತೋಷ್ ಇದ್ದರು. ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಶ್ವ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ‘ನಮ್ಮ ನಡಿಗೆ ವನ್ಯಜೀವಿಗಳ ಸಂರಕ್ಷಣೆ ಕಡೆಗೆ’ ಎಂಬ ಧ್ಯೇಯದೊಂದಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವನ್ಯಜೀವಿಗಳ ಸಂರಕ್ಷಣೆ ಕುರಿತು ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸ್ಪರ್ಧಾ ವಿಜೇತರು: ವನ್ಯಜೀವಿ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ವಿಜೇತ ವಿದ್ಯಾರ್ಥಿಗಳ ವಿವರ
ಪ್ರಬಂಧ ಸ್ಪರ್ಧೆ: ಹೆಬ್ಬಾಲೆ ಪ್ರೌಢಶಾಲೆಯ ಎ.ಜೆ. ಐಶ್ವರ್ಯ, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೆಚ್.ವೈ. ವಿದ್ಯಾಶ್ರೀ, ಹೆಬ್ಬಾಲೆ ಪ್ರೌಢಶಾಲೆಯ ಬಿ.ಎನ್. ಆನಂದ್ ಮೊದಲ ಮೂರು ಸ್ಥಾನ ಗಳಿಸಿದರು.
ಚಿತ್ರಕಲಾ ಸ್ಪರ್ಧೆ: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೆಚ್.ಎಸ್. ಸೂರಜ್, ಅಳುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎ.ಜೆ. ಲಿಖಿತ, ಹೆಬ್ಬಾಲೆ ಸೀಕ್ರೆಡ್ ಹಾರ್ಟ್ ಶಾಲೆಯ ಎಂ.ಜೆ. ವರ್ಷ ಮೊದಲ ಮೂರು ಸ್ಥಾನ ಪಡೆದರು.
ವಿಶ್ವ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ, ಪರಿಸರ, ಪ್ರಾಣಿ ವೈವಿಧ್ಯ ಕುರಿತಂತೆ ವನ್ಯಜೀವಿ ಛಾಯಾಚಿತ್ರಗಾರರೂ ಆದ ಪಶು ವೈದ್ಯ ತಜ್ಞರಾದ ಡಾ. ಸಿಂಧೂ ಹಾಗೂ ಡಾ. ಧನಲಕ್ಷ್ಮಿ ಅವರು ಪ್ರದರ್ಶಿಸಿದ ಛಾಯಾಚಿತ್ರ ಪ್ರದರ್ಶನ ವಿದ್ಯಾರ್ಥಿಗಳ ಗಮನ ಸೆಳೆಯಿತು.