ಸುಂಟಿಕೊಪ್ಪ, ಅ. 24: ಸುಂಟಿಕೊಪ್ಪ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಿದ್ದ ಬ್ಯಾರಿಕೇಡ್ ಸಂಬಂಧ ಸ್ಥಳೀಯ ನಾಗರೀಕರು ಹಾಗೂ ಅಂಗಡಿ ಮಾಲೀಕರ ಮಧ್ಯೆ ಪರ ವಾಗ್ವಾದ ನಡೆಯಿತು. ಸುಂಟಿಕೊಪ್ಪ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲ ಈ ಬಗ್ಗೆ ಸುಲಲಿತ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಸ್ಥಳೀಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ ಮೇರೆ ಸ್ಥಳಕ್ಕೆ ಕುಶಾಲನಗರ ಡಿವೈಎಸ್‍ಪಿ ಸಂಪತ್‍ಕುಮಾರ್ ವೃತ್ತ ನಿರೀಕ್ಷಕರಾದ ಕ್ಯಾತೇಗೌಡ, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದಾಗ ರಾಷ್ಟ್ರೀಯ ಹೆದ್ದಾರಿ ಬಳಿ ಹೊಟೇಲ್ ಹಾಗೂ ವಾಣಿಜ್ಯ ಮಳಿಗೆಗಳ ಕೆಲ ವರ್ತಕರು ಇಲ್ಲಿ ಅಳವಡಿಸಿದ ಬ್ಯಾರಿಕೇಡ್ ತೆಗೆಯಬೇಕು ನಮ್ಮ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ ಎಂದು ಅವಲತ್ತುಕೊಂಡರು. ಆಗ ಮಧ್ಯ ಪ್ರವೇಶಿಸಿದ ಸ್ಥಳೀಯ ನಾಗರಿಕರು ಈಗ ಅಳವಡಿಸಿದ ಬ್ಯಾರಿಕೇಡ್ ಸೂಕ್ತವಾಗಿದೆ. ಪಾದಾಚರಿಗಳಿಗೆ ಶಾಲಾ ಮಕ್ಕಳಿಗೆ ಅನುಕೂಲಕರ ವಾಗಿದೆ ಎಂದು ವಾದಿಸಿದರು. ಪರ ವಿರೋಧ ಚರ್ಚೆ ನಂತರ ಡಿವೈಎಸ್‍ಪಿ ಅವರು ಈಗ ಅಳವಡಿಸಿರುವ ಬ್ಯಾರಿಕೇಡ್ ಯಥಾಸ್ಥಿತಿಯಲ್ಲಿರಲು ಠಾಣಾಧಿಕಾರಿ ಗಳಿಗೆ ಸೂಚನೆ ನೀಡಿದರು.

ಸುಂಟಿಕೊಪ್ಪ ಬಸ್‍ನಿಲ್ಧಾಣದಲ್ಲಿ ಖಾಸಗಿ ಬಸ್ಸಿನವರು ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಿಲುಗಡೆ ಸರಿಯಾದ ಜಾಗದಲ್ಲಿ ಆಗುತ್ತಿಲ್ಲ ಎಂದು ನಾಗರೀಕರು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿ ಕೊಂಡು ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದರು.