ಕುಶಾಲನಗರ, ಅ 24: ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಐಬಿಗೆ ತೆರಳುವ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿರುವ ಹಿನೆÀ್ನಲೆಯಲ್ಲಿ ವ್ಯಾಪಾರ ವಹಿವಾಟು ಕುಸಿದಿದೆ ಎಂದು ಆರೋಪಿಸಿ ರಸ್ತೆ ಬದಿಯ ಅಂಗಡಿ ಮಳಿಗೆ ವರ್ತಕರು ಸಂಚಾರಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೌನ ಪ್ರತಿಭಟನೆ ನಡೆಸಿದರು.ಗಣಪತಿ ದೇವಾಲಯ ಮುಂಭಾಗದಿಂದ ಹಾದುಹೋಗುವ ರಸ್ತೆ ಪ್ರಮುಖ ವ್ಯಾಪಾರ ಮಳಿಗೆಗಳನ್ನು ಹೊಂದಿದ್ದು ಇತ್ತೀಚೆಗೆ ಈ ರಸ್ತೆಯಲ್ಲಿ ಕೇವಲ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ. ಅಲ್ಲದೆ ದೇವಾಲಯದ ಮುಂಭಾಗ ರಸ್ತೆಗೆ ಬ್ಯಾರಿಕೇಡ್‍ಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿರುವ ಕಾರಣ ವಾಹನ ಸಂಚಾರ ದುಸ್ಥರವಾಗಿದೆ. ಕೂಡಲೆ ಏಕಮುಖ ಸಂಚಾರ ಹಾಗೂ ಬ್ಯಾರಿಕೇಡ್‍ಗಳನ್ನು ತೆರವುಗೊಳಿಸ ಬೇಕೆಂದು ವರ್ತಕರು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರಪ್ರಸಾದ್, ಟ್ರಾಫಿಕ್ ಪೋಲಿಸರು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಕೈಗೊಂಡಿರುವ ಕ್ರಮದಿಂದ ವ್ಯಾಪಾರಸ್ಥರಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಪಟ್ಟಣದ ಹೃದಯ ಭಾಗದ ರಸ್ತೆಯನ್ನು ಏಕಮುಖ ಸಂಚಾರಗೊಳಿಸಿದ್ದು, ಗ್ರಾಹಕರ ಕೊರತೆಯಿಂದ ವ್ಯಾಪಾರ ವಹಿವಾಟಿಗೆ ತೀವ್ರ ಹಿನ್ನಡೆಯುಂಟಾಗಿದೆ ಎಂದರು. ಈ ಸಂದರ್ಭ ವ್ಯಾಪಾರಸ್ಥರಾದ ನಾಗೇಶ್, ಮುರಳೀಧರ್, ರಾಜುರಾಮ್, ನಾತುರಾಮ್, ಜಗದೀಶ್, ಭಾಸ್ಕರ್, ನಾಗೇಂದ್ರ ಮುಂತಾದವರು ಇದ್ದರು.