ಕುಶಾಲನಗರ, ಅ. 24: ಪ್ರಕೃತಿಯ ಆರಾಧನೆಯ ಮೂಲಕ ಪರಿಸರದ ಉಳಿವು ಸಾಧ್ಯ ಎಂದು ಐಶ್ವರ್ಯ ಸ್ವತಂತ್ರ ಪದವಿಪೂರ್ವ ಕಾಲೇಜು ಅಧ್ಯಕ್ಷರಾದ ಪುಲಿಯಂಡ ರಾಮ್ ದೇವಯ್ಯ ತಿಳಿಸಿದ್ದಾರೆ.

ಅವರು ಅಖಿಲ ಭಾರತ ಸಾಧುಸಂತರ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ 7ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ತಂಡ ಕಾಲೇಜಿನ ಆವರಣಕ್ಕೆ ಭೇಟಿ ನೀಡಿದ ಸಂದರ್ಭ ಉಪಸ್ಥಿತರಿದ್ದು ಮಾತನಾಡಿದರು. ಜೀವನದಿ ಕಾವೇರಿ ತಟಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾಗರೀಕರು ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಬೇಕಾಗಿದೆ. ಸರಕಾರ ಸೂಕ್ತ ಕಾನೂನು ರೂಪಿಸಿ ನದಿ ಮೂಲಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭ ಅಖಿಲ ಭಾರತ ಸಾಧುಸಂತರ ಸಂಘದ ಅಧ್ಯಕ್ಷರಾದ ಶ್ರೀ ವೇದಾನಂದ ಆನಂದ ಮಾತನಾಡಿ, ಕಾವೇರಿ ನದಿ ಉಗಮ ಸ್ಥಾನದಿಂದಲೇ ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಚಿಂತನೆ ಹರಿಸಬೇಕು. ಇಲ್ಲದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳ ಜನತೆ ಆತಂಕದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಸ್ಥಾಪಕ ಶ್ರೀ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ, ಸಂಚಾಲಕ ಚಂದ್ರಮೋಹನ್, ಯಾತ್ರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ದರೊಂದಿಗೆ ವಿದ್ಯಾರ್ಥಿಗಳು ನೀರಿನ ಮೌಲ್ಯದ ಬಗ್ಗೆ ತಿಳಿದುಕೊಳ್ಳ ಬೇಕಾಗಿದೆ ಎಂದರು.

ಇದೇ ಸಂದರ್ಭ ಸಾಧುಸಂತರ ತಂಡ ಕಾಲೇಜಿನ ಆವರಣದಲ್ಲಿರುವ ಶ್ರೀ ಮುನೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಕಾವೇರಿ ನದಿ ತೀರಕ್ಕೆ ಭೇಟಿ ನೀಡಿದರು. ಕಾಲೇಜಿನ ಆವರಣದಲ್ಲಿ ಗಿಡವೊಂದನ್ನು ನೆಡಲಾಯಿತು.

ಈ ಸಂದರ್ಭ ಕಾಲೇಜು ಆಡಳಿತ ಮಂಡಳಿ ಸಂಸ್ಥಾಪಕ ಪುಲಿಯಂಡ ಸುಬ್ಬಯ್ಯ ಮತ್ತು ಕುಟುಂಬ ಸದಸ್ಯರು, ಉದ್ಯಮಿ ಶಿವಪ್ರಕಾಶ್ ಮತ್ತು ಸಾಧುಸಂತರು ಇದ್ದರು.