ಮಡಿಕೇರಿ, ಅ. 25: ಕೇಂದ್ರ ಸರ್ಕಾರದ ಉದ್ದೇಶಿತ ಕಾಸರಗೋಡು - ಪಾಣತ್ತೂರು - ಮಡಿಕೇರಿ ರಾಷ್ಟ್ರೀಯ ಹೆದ್ದಾರಿಗೆ ಇಂದು ಕೇಂದ್ರ ಭೂ ಸಾರಿಗೆ ಸಚಿವಾಲಯವು ಅಧಿÀಕೃತವಾಗಿ ಹಸಿರು ನಿಶಾನೆ ತೋರುವದರೊಂದಿಗೆ ಖಾಸಗಿ ಸಂಸ್ಥೆಯೊಂದಕ್ಕೆ ಸರ್ವೆ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯು 25 ಮೀಟರ್ ವ್ಯಾಪ್ತಿಯೊಂದಿಗೆ ಕಾಸರಗೋಡುವಿನಿಂದ ಪಾಣತ್ತೂರು - ಕರಿಕೆ - ಭಾಗಮಂಡಲ ಮಾರ್ಗವಾಗಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ 105 ಕಿ.ಮೀ. ಕಾಮಗಾರಿ ಯೋಜನೆ ರೂಪುಗೊಳ್ಳಲಿದೆ. ಆ ಮೂಲಕ ಕಾಸರಗೋಡುವಿನಿಂದ ಕುಶಾಲನಗರ ಮಾರ್ಗವಾಗಿ ಬೆಂಗಳೂರಿಗೆ ಈ ಹೆದ್ದಾರಿ ಯೋಜನೆ ವಿಸ್ತಾರಗೊಳ್ಳುವ ನಿರೀಕ್ಷೆಯಿದೆ. ಇಂದು ಭೂ ಸಾರಿಗೆ ಇಲಾಖೆಯ ಈ 105 ಕಿ.ಮೀ. ರಸ್ತೆ ಸರ್ವೆಗೆ ತಮಿಳುನಾಡು ಮೂಲದ ಮುಖೇಶ್ ಅಸೋಸಿಯೇಟ್ ಎಂಬ ಖಾಸಗಿ ಉದ್ದಿಮೆಗೆ ಟೆಂಡರ್ ನೀಡಿದ್ದು, ರೂ. 2 ಕೋಟಿ ಅನುದಾನವನ್ನು ಕಲ್ಪಿಸಿದೆ.

ಮುಂದಿನ ಐದು ತಿಂಗಳ ಒಳಗಾಗಿ ಸರ್ವೆ ಪೂರ್ಣಗೊಳಿಸಿ ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಆದೇಶಿಸಲಾಗಿದೆ. ಈ ರಾಷ್ಟ್ರೀಯ ಹೆದ್ದಾರಿಯಿಂದ ಕೇರಳ - ಕರ್ನಾಟಕ ರಾಜಧಾನಿ ಬೆಂಗಳೂರು ನಡುವೆ ಭವಿಷ್ಯದಲ್ಲಿ ಸಂಪರ್ಕಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಕರಿಕೆ - ಭಾಗಮಂಡಲ ನಡುವೆ ಸಾಕಷ್ಟು ಅರಣ್ಯ ಪ್ರದೇಶ ಮತ್ತು ಭಾಗಮಂಡಲ - ಮಡಿಕೇರಿ ನಡುವೆ ಸಾಕಷ್ಟು ಖಾಸಗಿ ಜಮೀನು ಹೆದ್ದಾರಿ ನಿರ್ಮಾಣ ಬಳಕೆಯಾಗುವ ನಿರೀಕ್ಷೆಯಿದೆ.