ಮಡಿಕೇರಿ, ಅ. 25: ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬ್ರಿಟೀಷರು ಅಮಾನುಷವಾಗಿ ಗಲ್ಲಿಗೇರಿಸಿ 180 ವರ್ಷ ಸಂದಿದ್ದು. ಈ ಹಿನ್ನೆಲೆಯಲ್ಲಿ ತಾ. 31ರಂದು ಹುತಾತ್ಮರ ಸವಿ ನೆನಪಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಆಚರಿಸುವ ಬಗ್ಗೆ ಮಡಿಕೇರಿಯ ಗೌಡ ಸಮಾಜದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಉಸ್ತುವಾರಿ ಸಮಿತಿ ಅಧ್ಯಕ್ಷ ತುಂತಜೆ ವೆಂಕಟೇಶ್ (ಗಣೇಶ್) ಅವರು ವಹಿಸಿದ್ದರು. ಉಪಾಧ್ಯಕ್ಷ ಕೋಡಿ ಚಂದ್ರಶೇಖರ್, ಡಾ. ಯಾಲದಾಳು ಮನೋಜ್ ಬೋಪಯ್ಯ, ಬಾರಿಯಂಡ ಜೋಯಪ್ಪ, ಹುದೇರಿ ರಾಜೇಂದ್ರ, ಹೊಸೂರು ರಮೇಶ್ ಜೋಯಪ್ಪ, ತೋಟಂಬೈಲ್ ಪ್ರೇಮಾ ಆನಂದ, ತಳೂರು ಆನಂದ, ಪಾಣತ್ತಲೆ ಬಿದ್ದಪ್ಪ, ಕುರಿಕಡ ಆನಂದ ಮತ್ತು ಕೆದಂಬಾಡಿ ರಾಜೇಶ್ ಮುಂತಾದವರು ಭಾಗವಹಿಸಿದ್ದರು.

(ಮೊದಲ ಪುಟದಿಂದ) ಸಭೆಯಲ್ಲಿ ಶ್ರದ್ಧಾಂಜಲಿ ಆಚರಿಸುವ ಬಗ್ಗೆ ಚರ್ಚಿಸಲಾಯಿತು. ಅಂದು ಪೂರ್ವಾಹ್ನ 9 ಗಂಟೆಗೆ ಮಡಿಕೇರಿಯ ಸುದರ್ಶನ ವೃತ್ತದ ಬಳಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಅಪ್ಪಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಗುವದು. ನಂತರ ಮೆರವಣಿಗೆ ಮೂಲಕ ಕೋಟೆ ಆವರಣದಲ್ಲಿ ಅಪ್ಪಯ್ಯ ಗೌಡರನ್ನು ಗಲ್ಲಿಗೇರಿಸಿದ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸುವದಲ್ಲದೆ, ಸಭಾ ಕಾರ್ಯಕ್ರಮ ಏರ್ಪಡಿಸಲಾಗುವದು. ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಶಾಸಕರುಗಳನ್ನು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು, ಜಿಲ್ಲಾಧಿಕಾರಿಗಳನ್ನು, ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗಳನ್ನು ಮತ್ತು ಇನ್ನಿತರ ಗಣ್ಯರನ್ನು ಆಹ್ವಾನಿಸಲಾಗುವದು ಎಂದು ಸಮಿತಿ ಕಾರ್ಯದರ್ಶಿ ಅಮೆ ಪಾಲಾಕ್ಷ ತಿಳಿಸಿದ್ದಾರೆ.