ಚೆಟ್ಟಳ್ಳಿ, ಅ. 25: ಚೆಟ್ಟಳ್ಳಿಯ ಕೆಕೆಎಫ್‍ಸಿ ವತಿಯಿಂದ 3ನೇ ವರ್ಷದ ರಕ್ತದಾನ ಶಿಬಿರವನ್ನು ಚೆಟ್ಟಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.
ಕೆಕೆಎಫ್‍ಸಿಯ ಅಧ್ಯಕ್ಷ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಹಮದ್ ರಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಮಾತನಾಡಿ, ಸರಕಾರಿ ಆಸ್ಪತ್ರೆಗೆ ಬರುವವರು ಬಡವರಾಗಿದ್ದು, ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದರು.
ರಕ್ತದಾನ ಮಾಡುವ ಸೇವಾ ಕಾರ್ಯವನ್ನು ಮಾಡುತ್ತಿರುವ ಕೆಕೆಎಫ್‍ಸಿ ತಂಡವನ್ನು ಶ್ಲಾಘಿಸಿದರು. ಜಿಲ್ಲಾ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ಮಾತನಾಡಿ, ರಕ್ತದಾನ ಶಿಬಿರ ಮಡುವದರಿಂದ ತುರ್ತು ಸಂದರ್ಭಗಳಲ್ಲಿ ಅದೆಷ್ಟೋ ಜೀವ ಉಳಿಸಲು ಸಹಕಾರಿಯಾಗಲಿದೆ. ಅಪರೂಪದ ರಕ್ತ ಹೊಂದಿರುವ ದಾನಿಗಳ ಹೆಸರನ್ನು ನೋಂದಾಯಿಸಿಕೊಂಡರೆ ತುರ್ತು ಸಂದರ್ಭಗಳಲ್ಲಿ ಫಲಕಾರಿಯಾಗಲಿದೆ. 4 ತಿಂಗಳಿಗೊಮ್ಮೆ ರಕ್ತದಾನ ಮಾಡುವದರಿಂದ ಹಲವು ಖಾಯಿಲೆಗಳನ್ನು ತಡೆದು ಆರೋಗ್ಯವಂತ ಬದುಕು ಸಾಗಿಸಲು ಅನುಕೂಲವಾಗಲಿದೆಂದರು.
ಮಹಮದ್ ರಫಿ ಮಾತನಾಡಿ, ಬ್ಲಡ್ ಬ್ಯಾಂಕ್‍ಗಳ ಫಲಕದಲ್ಲಿ ರಕ್ತದ ಲಭ್ಯತೆ ಇದ್ದರೂ ಕೆಲವೊಂದು ಸಂದರ್ಭಗಳಲ್ಲಿ ರಕ್ತ ನೀಡದೆ ಸತಾಯಿಸಿರುವ ಘಟನೆಯ ಬಗ್ಗೆ ತಿಳಿಸಿದರು. ಎಲ್ಲರಿಗೂ ಸಹಕರಿಸುವ ಕೆಲಸ ಆಗಬೇಕೆಂದರು.
ಚೆಟ್ಟಳ್ಳಿಯ ಪೋಲಿಸ್ ಠಾಣೆಯ ಸಿಬ್ಬಂದಿಗಳು, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ ಸೇರಿ ಒಟ್ಟು 25 ಮಂದಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ, ಚೆಟ್ಟಳ್ಳಿ ಅರೋಗ್ಯ ಕೇಂದ್ರದ ವೈದ್ಯೆ ಯಶೋದ, ಕೆಕೆಎಫ್‍ಸಿಯ ಸಲಹೆಗಾರ ಶಶಿಕುಮಾರ್, ಸಂಘದ ಪದಾಧಿಕಾರಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು. ಜಬೇರ್ ಸ್ವಾಗತಿಸಿದರು.