ಮಡಿಕೇರಿ, ಅ. 25: ರಾಜ್ಯ ಸರಕಾರದಿಂದ ವಿತರಿಸಲಾಗುವ ಪಡಿತರ ಸಾಮಾಗ್ರಿ ಪೊರೈಕೆ ಸಂಬಂಧ, ಇಲ್ಲಿನ ಜನತಾ ಬಜಾರ್ ಮೂಲಕ ಆಹಾರಗಳನ್ನು ಪಡೆಯುವ ಫಲಾನುಭವಿಗಳಿಗೆ ತಿಂಗಳು ಕಳೆದರೂ ಸೌಲಭ್ಯ ವಿತರಣೆಯಾಗುತ್ತಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳ ನಿರಂತರ ಕಿರುಕುಳ ಈ ಅವ್ಯವಸ್ಥೆಗೆ ಕಾರಣವೆಂದು ಜನತಾ ಬಜಾರ್ ಅಧ್ಯಕ್ಷ ರವಿ ಬಸಪ್ಪ ಆರೋಪಿಸಿದ್ದಾರೆ.ಕಳೆದ ಜೂನ್ ಮಾಸದಿಂದಲೇ ಜನತಾ ಬಜಾರ್ ಮುಖಾಂತರ ಪಡಿತರ ಹೊಂದಿಕೊಳ್ಳುತ್ತಿರುವ ಬಿಪಿಎಲ್ ಹಾಗೂ ಎಪಿಎಲ್ ಗ್ರಾಹಕರು ತಿಂಗಳುಗಟ್ಟಲೆ ಕಾಯ್ದರೂ ಸಕಾಲದಲ್ಲಿ ಪಡಿತರ ಪೂರೈಕೆಯಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಜನತಾ ಬಜಾರ್ ಪಡಿತರ ಚೀಟಿದಾರರಿಗೆ ಈ ಮೊದಲು ಅಳವಡಿಸಿದ್ದ ಕೂಪನ್ ವ್ಯವಸ್ಥೆ ಸಂಬಂಧ, ಅಂತಹ ಏಜೆನ್ಸಿಗಳಿಗೆ ಇಲ್ಲಿನ ಆಹಾರ ಇಲಾಖೆ ಅಧಿಕಾರಿಗಳು ಹಣ ಪಾವತಿಸದೆ ವಂಚಿಸಿರುವ ಆರೋಪವಿದೆ.

ಅನಂತರದಲ್ಲಿ ಈ ಸಲುವಾಗಿ ನಿತ್ಯ ಅಲೆದಾಡಿದ ಅನೇಕರು ಪಡಿತರ ಪಡೆಯುವದ್ದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಕಾರಣ ರೂ. 38 ರಿಂದ 40 ರೂ. ಆಹಾರಕ್ಕೆ ದಿನಗಟ್ಟಲೆ ಕಾಯುವ ಬದಲಿಗೆ ದಿನದ ಕೂಲಿ ಹಣದಲ್ಲಿ ಉತ್ತಮ ಆಹಾರವನ್ನು ಬೇರೆಡೆಗಳಿಂದ ಖರೀದಿಸಿ ಊಟ ಮಾಡುವದು ಲೇಸೆಂದು ಇತ್ತ ಬೆನ್ನು ತಿರುಗಿಸಿದ್ದಾರೆ.

ಆ ಬಳಿಕ ನೇರವಾಗಿ ಜನತಾ ಬಜಾರ್‍ನಲ್ಲೇ ‘ಬೆಟ್ಟು ಮುದ್ರೆ’ಯೊಂದಿಗೆ ಹೊಸ ಯಂತ್ರ ಅಳವಡಿಸಿ ಒಂದು ತಿಂಗಳ ಪಡಿತರ ಪೂರೈಸಲಾಯಿತು. ಮರು ತಿಂಗಳಿಗೆ ‘ಬೆಟ್ಟು ಮುದ್ರೆ’ ಇತ್ಯಾದಿ ಬಿಟ್ಟು ನೇರವಾಗಿ ಕೆಲವರಿಗೆ ಆಹಾರ ಪೂರೈಸಲಾಯಿತು. ಇದೀಗ ಮತ್ತೆ ಅಕ್ಟೋಬರ್ 25 ದಿನಾಂಕ ಕಳೆಯುವ ಹೊತ್ತಿಗೆ ಜನತಾ ಬಜಾರ್‍ಗೆ ಆಹಾರ ಸಾಮಾಗ್ರಿ ಸರಬರಾಜುಗೊಳಿಸಿರುವ ಇಲಾಖೆಯು, ಹೊಸದಾಗಿ ಯಂತ್ರವೊಂದನ್ನು ಖರೀದಿಸಲು ಸೂಚಿಸಿದೆಯಂತೆ. ಈ ನೂತನ ಯಂತ್ರ ಖರೀದಿ ಬಳಿಕ ‘ಸಾಫ್ಟ್‍ವೇರ್’ ಯಂತ್ರ ಬದಲಾಯಿಸಿ ಅನಂತರ ಪಡಿತರ ಚೀಟಿದಾರರಿಗೆ ಸೌಲಭ್ಯ ನೀಡಲು ನಿರ್ದೇಶಿಸಿದೆಯಂತೆ. ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಈ ದಂಧೆಯಲ್ಲಿ ಬಡಪಾಯಿ ಪಡಿತರ ಚೀಟಿದಾರರು ಬಳಲಿ ಹೋಗಿದ್ದಾರೆ.

ಜನತಾ ಬಜಾರ್ ಸಿಬ್ಬಂದಿ ಹೈರಾಣರಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. -ಮಿರರ್