ಕೂಡಿಗೆ, ಅ. 25: ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ರಚಿಸಬೇಕು ಎನ್ನುವ ಜನರ ಒತ್ತಾಸೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಸಲುವಾಗಿ ಕುಶಾಲನಗರ ಹೋಬಳಿ ವ್ಯಾಪ್ತಿಗಳಲ್ಲಿ ನಿರಶನ, ರಸ್ತೆ ತಡೆ, ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಇಂದು ಕೂಡಿಗೆಯ ಸರ್ಕಲ್‍ನಲ್ಲಿ ಕಾವೇರಿ ತಾಲೂಕು ರಚನಾ ಸ್ಥಾನೀಯ ಸಮಿತಿಯ ವತಿಯಿಂದ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು.

ಕಾವೇರಿ ತಾಲೂಕು ರಚನಾ ಹೋರಾಟ ಕೂಡಿಗೆ ಸ್ಥಾನೀಯ ಸಮಿತಿಯ ಅಧ್ಯಕ್ಷ ಕೆ.ಎಸ್.ಕಾಂತರಾಜ್ ಮಾತನಾಡುತ್ತಾ, ಕುಶಾಲನಗರ ತಾಲೂಕು ರಚನೆಗೆ ಬೇಕಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದು, ಬೆಂಬಲ ಸೂಚಿಸಲು ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 14 ಉಪಗ್ರಾಮಗಳ ಮನೆ ಮನೆಗಳಿಂದಲೂ ಹೋರಾಟಕ್ಕೆ ಸನ್ನಧರಾಗಿದ್ದೇವೆ ಎಂದರು.

ಕೊಡಗು ಜಿಲ್ಲಾ ದಲಿತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಅಣ್ಣಯ್ಯ ಮಾತನಾಡುತ್ತಾ, ತಾಲೂಕಿಗೆ ಬೇಕಿರುವ ಎಲ್ಲಾ ಸೌಲಭ್ಯಗಳು ಈ ಕುಶಾಲನಗರ ವ್ಯಾಪ್ತಿಯಲ್ಲಿದ್ದರೂ ಸಹ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲು ಸರ್ಕಾರ ಯಾಕೋ ಮೀನಮೇಷ ಎಣಿಸುತ್ತಿದೆ. ಹಾಗಾಗಿ ಸರ್ಕಾರದ ಗಮನ ಸೆಳೆಯಲು ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಲಾಗಿದೆ ಎಂದರು.

ಕೊಡಗು ಜಿಲ್ಲಾ ಐಎನ್‍ಟಿಯೂಸಿ ಅಧ್ಯಕ್ಷ ಟಿ.ಪಿ.ಹಮೀದ್ ಮಾತನಾಡಿ, ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಮ್ಮ ಹೋರಾಟವನ್ನು ಮುಂದುವರೆಸಲಾಗುವದು ಎಂದರು.

ಈ ಸಂದರ್ಭ ಕಾವೇರಿ ತಾಲೂಕು ರಚನಾ ಹೋರಾಟ ಸ್ಥಾನೀಯ ಸಮಿತಿಯ ಕಾರ್ಯದರ್ಶಿ ಕೆ.ಕೆ.ನಾಗರಾಜಶೆಟ್ಟಿ, ಬಸವೇಶ್ವರ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಕೆ.ಟಿ.ಶ್ರೀನಿವಾಸ್, ಗೂಡ್ಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜಯ್ಯ, ಆಟೋ ಚಾಲಕರ ಸಂಘದ ಅಧ್ಯಕ್ಷ ವೀರಭದ್ರ, ಕೂಡಿಗೆ ಗ್ರಾಮ ಪಂಚಾಯ್ತಿ ಸದಸ್ಯ ರಾಮಚಂದ್ರ ಸೇರಿದಂತೆ ವಿವಿಧ ಸಂಘಗಳ ಮಖಂಡರುಗಳು, ನೂರಾರು ಗ್ರಾಮಸ್ಥರು ಹೋರಾಟದಲ್ಲಿ ಭಾಗವಹಿಸಿದ್ದರು.