ಮಡಿಕೇರಿ, ಅ. 25 : ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು ‘ವಿಷನ್-2025 ಡಾಕ್ಯುಮೆಂಟ್’ ಹೆಸರಿನಲ್ಲಿ ನೀಲಿನಕ್ಷೆ ಮತ್ತು ಅನುಷ್ಠಾನ ಕಾರ್ಯ ಯೋಜನೆ ಸಿದ್ಧಪಡಿಸುತ್ತಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ಪತ್ರಕರ್ತರಿಂದ ಸಲಹೆ, ಅಭಿಪ್ರಾಯ ಪಡೆಯಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪತ್ರಕರ್ತ ಜಿ. ಚಿದ್ವಿಲಾಸ್ ಅವರು 2025 ವಿಷನ್ ಸಂಬಂಧಿಸಿದಂತೆ ಮಾಹಿತಿ ನೀಡಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಾಸ್ತವ್ಯ ಹೂಡುವಂತಾಗಲು ವಸತಿ ಸಂಕೀರ್ಣ ನಿರ್ಮಿಸಬೇಕು ಎಂದು ಸಲಹೆ ಮಾಡಿದರು.
ನೆಹರು ಮಂಟಪದಿಂದ ರಾಜಾಸೀಟುವರೆಗೆ ರೂಪ್‍ವೇ ನಿರ್ಮಾಣ ಮಾಡಬೇಕು. ಪುಷ್ಪೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶೈತ್ಯಾಗಾರ ನಿರ್ಮಾಣ ಮಾಡಬೇಕು. ಕುಶಾಲನಗರದವರೆಗೆ ರೈಲು ಸಂಪರ್ಕ ಕಲ್ಪಿಸಬೇಕು. ಪರಿಸರ ಸ್ನೇಹಿ ಕೈಗಾರಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಇನ್ವೆಸ್ಟ್ ಸಮ್ಮೇಳನ ನಡೆದಿದ್ದು, ಅದರ ಪ್ರಯೋಜನ ಪಡೆಯಬೇಕು ಎಂದು ಜಿ. ಚಿದ್ವಿಲಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹೈನುಗಾರಿಕೆ ಅಭಿವೃದ್ಧಿ, ಹೈಟೆಕ್ ನರ್ಸರಿ ಕುಶಾಲನಗರ ಮತ್ತು ಗೋಣಿಕೊಪ್ಪದಲ್ಲಿ ಜವಳಿ ಉದ್ಯಮ ಅಭಿವೃದ್ಧಿ, ಮಡಿಕೇರಿ ನಗರದಲ್ಲಿ ಸಿಟಿ ಬಸ್ ವ್ಯವಸ್ಥೆ, ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಬಸ್ ಸೌಲಭ್ಯ ಕಲ್ಪಿಸುವದು, ಪ್ರವಾಸೋದ್ಯಮ ಇಲಾಖೆಯನ್ನು ಮಾಹಿತಿ ಕೇಂದ್ರವನ್ನಾಗಿ ಮಾಡಬೇಕಿದೆ ಎಂದು ಅವರು ಸಲಹೆ ನೀಡಿದರು.
ಪತ್ರಕರ್ತ ಅನಿಲ್ ಎಚ್.ಟಿ. ಮಾಹಿತಿ ನೀಡಿ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿದ್ದು, ಅವುಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವತ್ತ ಮುಂದಾಗಬೇಕಿದೆ. ಗುಡಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಸಲಹೆ ನೀಡಿದರು.
ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬೇಕಿದೆ ಎಂದು ಹೇಳಿದರು.
ಪತ್ರಕರ್ತ ಮಂಜುನಾಥ ಆಹಾರ ಭದ್ರತೆ ಮತ್ತು ಅಂತರ್ಜಾಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಆ ನಿಟ್ಟಿನಲ್ಲಿ ಭತ್ತ ಬೆಳೆಯಲು ಉತ್ತೇಜನ ನೀಡುವದು, ಜೊತೆಗೆ ಮಾಜಿ ಸೈನಿಕರಿಗೆ ನಿವೇಶನ ಒದಗಿಸಬೇಕಿದೆ. ಹಾಗೆಯೇ ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಯಾವ ರೀತಿ ಆದಾಯ ಬರುತ್ತದೆ ಎಂಬದನ್ನು ಖಾತರಿಪಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಪತ್ರಕರ್ತ ಮನುಶೆಣೈ ಮಾಹಿತಿ ನೀಡಿ ಕೊಡಗು ಜಿಲ್ಲೆ ಅಭಿವೃದ್ಧಿ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಸಭೆಗಳು, ಚಿಂತನಾ ಸಭೆಗಳು ನಡೆದಿದ್ದು, ಅವುಗಳನ್ನು ಪಡೆದು ಮುಂದಿನ ವಿಷನ್‍ಗೆ ತೆಗೆದುಕೊಳ್ಳುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಶ್ರೀಧರ ನೆಲ್ಲಿತ್ತಾಯ ಮಾತನಾಡಿ ಪ್ರವಾಸಿಗರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮಾಹಿತಿ ಕೇಂದ್ರ ತೆರೆಯಬೇಕು. ಸಂಚಾರ ದಟ್ಟಣೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ರಾಜಾಸೀಟಿನ ಅಭಿವೃದ್ಧಿ ಸಂಬಂಧಿಸಿದಂತೆ ಇನ್ನಷ್ಟು ಕಾಯಕಲ್ಪ ಮಾಡಬೇಕಿದೆ. ಆಸ್ಪತ್ರೆಗಳಲ್ಲಿ ಇನ್ನಷ್ಟು ಸೇವೆಗಳನ್ನು ಒದಗಿಸಲು ಮುಂದಾಗಬೇಕಿದೆ ಎಂದು ಹೇಳಿದರು. ಪತ್ರಕರ್ತ ಚಂದ್ರಮೋಹನ್, ಬಿ.ಸಿ.ದಿನೇಶ್, ಸವಿತಾ ರೈ, ಆನಂದ್ ಕೊಡಗು, ಚಿ.ನಾ.ಸೋಮೇಶ್ ಇತರರು ಇದ್ದರು.
ಮಾಹಿತಿ ಪಡೆಯುವದಕ್ಕೂ ಮೊದಲು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ವಿಷನ್-2025 ಡಾಕ್ಯುಮೆಂಟ್ ರೂಪುರೇಷೆ ಸಂಬಂಧ ಹಲವು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ನೋಡಲ್ ಅಧಿಕಾರಿಗಳಾದ ಸಿ.ಜಗನ್ನಾಥ್, ಕೆ.ವಿ.ಸುರೇಶ್, ಮಾಡರೇಟ್‍ಗಳಾದ ನಟೇಶ್, ಭಾಗ್ಯಲಕ್ಷ್ಮಿ, ಪ್ರಮೋದ್ ಇತರರು ಇದ್ದರು.