ಸೋಮವಾರಪೇಟೆ,ಅ.25: 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ತಕ್ಷಣ ಜಾರಿಗೆ ತರಬೇಕು. ಬೆಳಗಾವಿ ಅಧಿವೇಶನದಲ್ಲಿಯೇ ಈ ಬಗ್ಗೆ ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರುಗಳು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸದಸ್ಯರುಗಳು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ತಕ್ಷಣ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸರ್ಕಾರಿ ನೌಕರರ ವೇತನ ಕಡಿಮೆಯಿದೆ. ಸರ್ಕಾರದಿಂದಲೇ ನೌಕರರು ಜೀತದಾಳುಗಳಾಗಿದ್ದಾರೆ. ರಾಜ್ಯದ ನೌಕರರಿಗೂ ಹಾಗೂ ಕೇಂದ್ರದ ನೌಕರರಿಗೂ ಶೇ.300ರಷ್ಟು ವೇತನದಲ್ಲಿ ವ್ಯತ್ಯಾಸವಿದೆ. ಇದನ್ನು ಹೋಗಲಾಡಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಒತ್ತಾಯಿಸಿದರು.

6ನೇ ವೇತನ ಆಯೋಗ ತನ್ನ ಅಂತಿಮ ವರದಿ ಸಲ್ಲಿಸುವ ಪೂರ್ವದಲ್ಲಿ ತಾ. 1.4.2017ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇ. 30 ರಷ್ಟನ್ನು ಮಧ್ಯಂತರ ಪರಿಹಾರವಾಗಿ ನೀಡಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ರಾಜ್ಯ ಸರ್ಕಾರದ ಪಿಂಚಣಿದಾರರಿಗೆ ಹಾಲಿ ಪಡೆಯುತ್ತಿರುವ ಪಿಂಚಣಿಯ ಶೇ.30ರಷ್ಟನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನವೆಂಬರ್ ಒಳಗೆ ರಾಜ್ಯ ಸರ್ಕಾರಕ್ಕೆ ಇದು ಸಾಧ್ಯವಾಗದಿದ್ದರೆ ಕೇಂದ್ರದ ವೇತನ ಆಯೋಗದ ಶಿಫಾರಸ್ಸುಗಳನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಕೆಲಸಕ್ಕೆ ಹಾಜರಾಗದೇ ಹೋರಾಟ ಸಂಘಟಿಸುವದಾಗಿ ಎಚ್ಚರಿಸಿದರು. ಈ ಸಂಬಂಧಿತ ಮನವಿ ಪತ್ರವನ್ನು ಶಿರಸ್ತೇದಾರ್ ಧರ್ಮಪ್ಪ ಅವರ ಮೂಲಕ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ತಾಲೂಕು ಅಧ್ಯಕ್ಷ ಎಚ್.ಎನ್.ಮಂಜುನಾಥ್, ಗೌರವಾಧ್ಯಕ್ಷ ಯೋಗೇಶ್, ವಲಯ ಉಪಾಧ್ಯಕ್ಷ ಶಿವಕುಮಾರ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್, ಉಪನ್ಯಾಸಕ ಸಂಘದ ಜಿಲ್ಲಾ ಕಾರ್ಯದರ್ಶಿ ಪಿಲಿಪ್‍ವಾಸ್, ನೌಕರರ ಸಂಘದ ಕಾರ್ಯದರ್ಶಿ ಶಿವಪ್ರಕಾಶ್, ಸಹ ಕಾರ್ಯದರ್ಶಿ ಎಂ. ಗಣೇಶ್, ದೈಹಿಕ ಶಿಕ್ಷಕರ ಸಂಘದ ಕೃಷ್ಣಮೂರ್ತಿ, ರಾಜ್ಯ ಪರಿಷತ್ ಸದಸ್ಯ ಕೆ.ಪಿ.ಮಹೇಶ್, ಖಜಾಂಚಿ ವಿ.ಎಸ್.ಸುಗುಣಾನಂದ, ಲಿಪಿಕಾ ಸಂಘದ ಚನ್ನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.