ಮಡಿಕೇರಿ, ಅ.25: ಕರಿಮೆಣಸು ಆಮದನ್ನು ಭಾರತಕ್ಕೆ ನಿರ್ಬಂಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಗಮನ ಹರಿಸಬೇಕೆಂದು ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಕೊಡಗು ಜಿಲ್ಲಾ ಬೆಳೆಗಾರರ ಸಂಘ ಮನವಿ ಸಲ್ಲಿಸಿದೆ.
ಮಡಿಕೇರಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾದ ಬೆಳೆಗಾರರ ಒಕ್ಕೂಟ ಮತ್ತು ಜಿಲ್ಲಾ ಬೆಳೆಗಾರರ ಸಂಘದ ನಿಯೋಗವು ಭಾರತಕ್ಕೆ ವಿಯೆಟ್ನಾಂ, ಶ್ರೀಲಂಕಾ, ಇಂಡೊನೆಶ್ಯಿಯಾ ದೇಶಗಳಿಂದ ಸಾವಿರಾರು ಟನ್ ಕರಿಮೆಣಸು ಆಮದಾಗುತ್ತಿದ್ದು ಇದರಿಂದಾಗಿ ಸ್ಥಳೀಯವಾಗಿ ಬೆಳೆಸಲಾದ ಕರಿಮೆಣಸಿಗೆ ಬೇಡಿಕೆ ಇಳಿಮುಖವಾಗುತ್ತಿದೆ. ಕರಿಮೆಣಸಿಗೆ ದೊರಕುತ್ತಿದ್ದ ಉತ್ತಮ ಬೆಲೆಯೂ ದೊರಕದಂತಾಗಿದೆ. ಈ ಹಿನ್ನಲೆಯಲ್ಲಿ ಭಾರತ ಸರ್ಕಾರ ಕೂಡವೇ ವಿದೇಶಿ ಕರಿಮೆಣಸು ಆಮದಿಗೆ ಕಡಿವಾಣ ಹಾಕಿ ನಿರ್ಬಂಧ ಹೇರುವಂತೆ ಬೆಳೆಗಾರರ ನಿಯೋಗ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಸಾಕಷ್ಟು ದಾಖಲೆಗಳ ಸಹಿತ ಸಂಸದರಿಗೆ ಕರಿಮೆಣಸು ಆಮದಿ ನಿಂದಾಗಿ ಭಾರತೀಯ ಕರಿಮೆಣಸು ಉದ್ಯಮಕ್ಕೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ನಿಯೋಗದ ಸದಸ್ಯರು ಸಂಸದರಿಗೆ ಮನವರಿಕೆ ಮಾಡಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ, ಕೇಂದ್ರದ ವಾಣಿಜ್ಯ ಸಚಿವ ಸುರೇಶ್ ಕುಮಾರ್ ಅವರಿಗೆ ಈ ವಿಚಾರವನ್ನು ಈಗಾಗಲೇ ತಿಳಿಯಪಡಿಸಿದ್ದು, ಶೀಘ್ರದಲ್ಲಿಯೇ ಪೂರಕ ದಾಖಲೆಗಳ ಸಹಿತ ಪತ್ರ ಬರೆಯುತ್ತೇನೆ. ಅಂತೆಯೇ ಬೆಳೆಗಾರರ ನಿಯೋಗಕ್ಕೂ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿಯಾಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಭೇಟಿಗೆ ದಿನ ನಿಗಧಿಪಡಿಸುವದಾಗಿ ಭರವಸೆ ನೀಡಿದರು.
ಬೆಳೆಗಾರರ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾಬೆಳ್ಯಪ್ಪ, ವಕ್ತಾರ ಕೆ.ಕೆ. ವಿಶ್ವನಾಥ್, ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ನಂದಿನೆರವಂಡ ದಿನೇಶ್, ಗೌರವ ಕಾರ್ಯದರ್ಶಿ ಜಿ.ಡಿ. ಶಿವಶಂಕರ್ ಹಾಜರಿದ್ದು ಮಾಹಿತಿ ನೀಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ಸಂದರ್ಭ ಇದ್ದರು.