ಮಡಿಕೇರಿ, ಅ. 25: ಕಾನೂನು ಉಲ್ಲಂಘಿಸಿದ ಆರೋಪದಡಿ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ‘ರಾಯಲ್ ಬ್ರದರ್ಸ್’ ಸಂಸ್ಥೆಯ ಸುಮಾರು 22 ಬೈಕ್‍ಗಳನ್ನು ಆರ್‍ಟಿಓ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ರಾಯಲ್ ಬ್ರದರ್ಸ್ ಸಂಸ್ಥೆಯ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಬೈಕ್‍ಗಳಿಗೆ ಮಡಿಕೇರಿ ನಗರದಲ್ಲಿ ಕಚೇರಿ ತೆರೆದು ಕಾರ್ಯಾಚರಿಸಲು ಕಾನೂನಿನಡಿ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಅಗತ್ಯವಿಲ್ಲ : ಪ್ರವಾಸಿ ವಾಹನ ಚಾಲಕರು - ಮಾಲೀಕರು ಪ್ರವಾಸಿಗರನ್ನು ನಂಬಿ ಬದುಕುತ್ತಿದ್ದು, ಈ ಬೈಕ್‍ಗಳಿಂದಾಗಿ ನಮ್ಮ ವೃತ್ತಿಗೆ ಅಡ್ಡಿಯಾಗುತ್ತಿದೆ. ಸಾಕಷ್ಟು ವರ್ಷಗಳಿಂದ ಇದೇ ವೃತ್ತಿಯನ್ನು ಅವಲಂಬಿಸಿರುವ ಮಾಲೀಕರು ಹಾಗೂ ಚಾಲಕರುಗಳು ಈ ಬೈಕ್‍ಗಳ ಕಾರ್ಯಾಚರಣೆಯಿಂದಾಗಿ ಬಾಡಿಗೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಪ್ರವಾಸಿ ಬೈಕ್ ವ್ಯವಸ್ಥೆ ಗೆ ಇಲ್ಲಿ ಅವಕಾಶ ನೀಡಬಾರದೆಂದು ಪ್ರವಾಸಿ ವಾಹನ ಚಾಲಕರು - ಮಾಲೀಕರ ಸಂಘದ ಅಧ್ಯಕ್ಷ ಸಂಪತ್‍ಕುಮಾರ್ ‘ಶಕ್ತಿ’ ಮೂಲಕ ಒತ್ತಾಯಿಸಿದ್ದಾರೆ.