ಮಡಿಕೇರಿ, ಅ. 25: ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ವಿವಿಧ ಮೂಲಗಳಿಂದ ಕೇಂದ್ರ ಸರಕಾರ ನೀಡಿರುವ ಅನುದಾನ ರೂ. 2 ಲಕ್ಷ ಕೋಟಿಯನ್ನು ಸಮರ್ಪಕವಾಗಿ ಬಳಕೆ ಮಾಡದೆ, ಹಣ ದುರುಪಯೋಗ ದೊಂದಿಗೆ ತಾನು ಸೇರಿದಂತೆ ಬಿ.ಜೆ.ಪಿ. ನಾಯಕರ ವಿರುದ್ಧ ಆರೋಪದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ದಾಖಲೆಗಳ ಸಹಿತ ಸಾಬೀತುಗೊಳಿಸು ವಂತೆ ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.ಇಲ್ಲಿನ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ದೇಶದಲ್ಲಿ ಒಂದನೇ ಸ್ಥಾನದಲ್ಲಿ ಭ್ರಷ್ಟಾಚಾರ ನಿರತ ಕರ್ನಾಟಕ ಸರಕಾರವೆಂದು ಜರೆದ ಶೋಭಾ ಕರಂದ್ಲಾಜೆ, ತನ್ನ ಅಧಿಕಾರ ಅವಧಿಯಲ್ಲಿ ವಿದ್ಯುತ್ ಖರೀದಿಯ ಅವ್ಯವಹಾರದ ಕುರಿತು ಪ್ರಸ್ತಾಪಿಸಿರುವ ಮುಖ್ಯಮಂತ್ರಿಗಳು ದಾಖಲೆ ಗಳೊಂದಿಗೆ ಮಾತನಾಡುವಂತೆ ಆಗ್ರಹಪಡಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಆರೋಪ ಬಹಿರಂಗಗೊಳಿಸುವದಾಗಿ ತಾನು ಸಹಿತ ಯಡಿಯೂರಪ್ಪ ಅವರ ಬಾಯಿ ಮುಚ್ಚಿಸಲು ಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯ ಅವರ ಗೊಡ್ಡು ಬೆದರಿಕೆಗಳಿಗೆ ಅಂಜುವ ಜಾಯಮಾನ ದವರು ಬಿ.ಜೆ.ಪಿ. ಯವರಲ್ಲವೆಂದು ತಿರುಗೇಟು ನೀಡಿದರು.
ಗಲಭೆಗೆ ಸರಕಾರ ಹೊಣೆ
ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಹಿತ ಕಡೆಗಣಿಸಿ ಕೋಮುಗಲಭೆ ಸೃಷ್ಟಿಸಲು ಟಿಪ್ಪು ಜಯಂತಿ ಆಚರಣೆಯೊಂದಿಗೆ ಮತಬ್ಯಾಂಕ್ ರಾಜಕಾರಣದಲ್ಲಿ ತೊಡಗಿದ್ದಾಗಿ ಆರೋಪಿಸಿದ ಸಂಸದರು, ರಾಜ್ಯ ಸರಕಾರ ಜನರ ತೆರಿಗೆ ಹಣದಿಂದ ಟಿಪ್ಪು ಜಯಂತಿ ಆಚರಣೆಗೆ ಬಿ.ಜೆ.ಪಿ.ಯು ಮೊದಲಿನಿಂದಲೂ ವಿರೋಧಿಸುತ್ತಿದೆ ಎಂದರಲ್ಲದೆ, 20ಕ್ಕೂ ಅಧಿಕ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಸಹಿತ ಎಲ್ಲಾ ಗಲಭೆಗಳಿಗೆ ರಾಜ್ಯ ಸರಕಾರ ಹೊಣೆಯೆಂದು ಬೊಟ್ಟು ಮಾಡಿದರು.
ಟಿಪ್ಪು ಜಯಂತಿ ವೇಳೆ ಮತಾಂಧ ಶಕ್ತಿಗಳಿಂದ ಕೊಡಗಿನಲ್ಲಿ ಕುಟ್ಟಪ್ಪ ಹತ್ಯೆ, ಪೊಲೀಸ್ ಅಧಿಕಾರಿಗಳಾದ ಗಣಪತಿ, ಕಲ್ಲಪ್ಪ ಹಂಡಿಬಾಗ್ ಸೇರಿದಂತೆ ಅನೇಕರ ಸಾವಿಗೆ ರಾಜ್ಯ ಸರಕಾರ ನೇರ ಕಾರಣವೆಂದು ಶೋಭಾ ಟೀಕಿಸಿದರು.
ರಾಜ್ಯ ಸರಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಹಣದ ಖಜಾನೆ ಅಥವ ಎ.ಟಿ.ಎಂ. ಇದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಎಂ.ಕೆ. ಗಣಪತಿ ಪ್ರಕರಣದಲ್ಲಿ ಕೇವಲ 3 ತಿಂಗಳಿನಲ್ಲಿ ಸಿ.ಐ.ಡಿ. ತನಿಖೆ ಮುಗಿಸಿ, ಆರೋಪಕ್ಕೆ ಗುರಿಯಾಗಿರುವ ಜಾರ್ಜ್ ಅವರನ್ನು ಮತ್ತೆ ಸಂಪುಟದಲ್ಲಿ ಸೇರಿಸಿಕೊಳ್ಳಲು ಹಣದ ದಂಧೆ ಕಾರಣವೆಂದು ಆರೋಪಿಸಿದರು. ಇದೀಗ ಸಿ.ಬಿ.ಐ. ತನಿಖೆಗೆ ಕೋರ್ಟ್ ಆದೇಶಿಸಿದ್ದರೂ, ರಾಜ್ಯದ ಮುಖ್ಯಮಂತ್ರಿ ಜಾರ್ಜ್ ಅವರನ್ನು ಸಂಪುಟದಿಂದ ಕೈಬಿಡದೆ ಸಾಕ್ಷ್ಯ ನಾಶದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ಹೊರಗೆಡವಿದರು.
ನವ ಕರ್ನಾಟಕ ಯಾತ್ರೆ
ನವೆಂಬರ್ 2 ರಂದು ರಾಜಧಾನಿ ಬೆಂಗಳೂರಿನಿಂದ ನವ ಕರ್ನಾಟಕ ಯಾತ್ರೆಗೆ ಬಿ.ಜೆ.ಪಿ. ರಾಷ್ಟ್ರಾಧ್ಯಕ್ಷ ಅಮಿತ್ ಷಾ ಚಾಲನೆ ನೀಡಲಿದ್ದು, ಜ. 28 ರಂದು ರಾಜ್ಯದ 17 ಜಿಲ್ಲೆಗಳಲ್ಲಿ ಕ್ರಮಿಸಿ ಮುಕ್ತಾಯಗೊಳ್ಳುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡುತ್ತಾ, ಆ ಮೂಲಕ ರಾಜ್ಯದ ಭ್ರಷ್ಟ ಸರಕಾರಕ್ಕೆ ಇತಿಶ್ರೀ ಹಾಡಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಪಕ್ಷ ಬಿಡಲಾರರು
ಬಿ.ಜೆ.ಪಿ.ಯ ರಾಜ್ಯ ರೈತ ಮೋರ್ಚಾ ಅಧ್ಯಕ್ಷರೂ ಆಗಿರುವ ಮಾಜಿ ಸಂಸದ ಹಾಗೂ ಪಕ್ಷದ ಅನೇಕ ಜವಾಬ್ದಾರಿ ಗಳನ್ನು ಅನುಭವಿಸಿರುವ ವಿಜಯ ಶಂಕರ್ ಪಕ್ಷ ತೊರೆ ಯಲಾರರು ಎಂದು ವಿಶ್ವಾಸ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಅವರೊಂದಿಗೆ ಮಾತುಕತೆ ನಡೆಸಿ ಬಿ.ಜೆ.ಪಿ.ಯಲ್ಲೇ ಉಳಿಸಿಕೊಳ್ಳ ಲಾಗುವದು ಎಂದರು.
ನವ ಕರ್ನಾಟಕ ಯಾತ್ರೆ ಯೊಂದಿಗೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿದ್ದು, ನ. 8 ರಂದು ಮಡಿಕೇರಿ ಮೂಲಕ ಮಂಗಳೂರಿಗೆ ತೆರಳಲಿರುವ ಯಾತ್ರೆಯ ಸಂಬಂಧ, ಕೊಡಗು ಜಿಲ್ಲಾ ಕೇಂದ್ರದಲ್ಲಿ ಸಮಾವೇಶ ನಡೆಸ ಲಾಗುವದು ಎಂದರಲ್ಲದೆ, ಪ್ರತಿ ಗ್ರಾಮ ದಿಂದ ಈ ಯಾತ್ರೆಗಳಲ್ಲಿ ಸಾವಿರಾರು ಯುವಕರು ದ್ವಿಚಕ್ರ ವಾಹನಗಳಲ್ಲಿ ಭಾಗವಹಿಸಲಿ ದ್ದಾರೆ ಎಂದು ಮಾಹಿತಿ ನೀಡಿದರು.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಪದಾಧಿಕಾರಿಗಳಾದ ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ಬಾಲಚಂದ್ರ ಕಳಗಿ, ಕಾಂತಿ ಸತೀಶ್, ವಿ.ಕೆ. ಲೋಕೇಶ್, ಮಾಜಿ ಶಾಸಕ ಎಸ್.ಜಿ. ಮೇದಪ್ಪ, ರವಿ ಬಸಪ್ಪ, ಬಿ.ಕೆ. ಅರುಣ್, ಜಗದೀಶ್ ಮೊದಲಾದವರು ಹಾಜರಿದ್ದರು.