ಇಲ್ಲಿನ ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಿತು.ಬತ್ತಿರುವ ಆನೆಕೆರೆ ಪುನಶ್ಚೇತನ, ಪ.ಪಂ. ವಾಣಿಜ್ಯ ಸಂಕೀರ್ಣದ ಸಭಾಂಗಣ ಉನ್ನತೀಕರಣಕ್ಕೆ ಸಾರ್ವಜನಿಕರು ಒತ್ತಾಯಿಸಿದ ಸಂದರ್ಭ, ಪಟ್ಟಣ ಪಂಚಾಯಿತಿಗೆ ಅನುದಾನವೇ ಬರುತ್ತಿಲ್ಲ. ನಗರೋತ್ಥಾನ ಯೋಜನೆಯಡಿ 5 ಕೋಟಿ ಘೋಷಿಸಿ ಕೇವಲ 2 ಕೋಟಿ ಬಿಡುಗಡೆ ಮಾಡುವದಾಗಿ ತಿಳಿಸಿದ್ದಾರೆ. ಇದರಲ್ಲಿ 1 ಕೋಟಿ ಅನುದಾನದಲ್ಲಿ ರಸ್ತೆ, 25 ಲಕ್ಷಕ್ಕೆ ನೀರಿನ ಸೌಕರ್ಯ ಸೇರಿದಂತೆ ಉಳಿದ ಅನುದಾನದಲ್ಲಿ ಚರಂಡಿ ಇತರ ಕಾಮಗಾರಿಗೆ ಮೀಸಲಿಡಲಾಗಿದೆ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಸಹಾಯಕತೆ ವ್ಯಕ್ತಪಡಿಸಿದರು.ಪಟ್ಟಣದ ಹೈಟೆಕ್ ಮಾರುಕಟ್ಟೆಯನ್ನು ಉನ್ನತಿಗೇರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈಗಿರುವ ಮಾರುಕಟ್ಟೆಯ ತಳಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಸಂಬಂಧ ಯೋಜನೆ ತಯಾರಿಸಿ 3 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವಿಷನ್ 2025 ಡಾಕ್ಯುಮೆಂಟ್‍ಗೆ ಸಂಬಂಧಿಸಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಬೆರಳೆಣಿಕೆಯಷ್ಟು ಮಂದಿ ತಮ್ಮ ಸಲಹೆಗಳನ್ನು ನೀಡಿದರು. ಪಟ್ಟಣದ ಅಭಿವೃದ್ಧಿಗೆ ತೊಡಕಾಗಿರುವ ಪಂಚಾಯ್ತಿಯ ವಿಸ್ತೀರ್ಣವನ್ನು ಹೆಚ್ಚಿಸುವ ಬಗ್ಗೆ ಅನೇಕ ಬಾರಿ ಒತ್ತಾಯಿಸಿದ್ದರೂ ಆಡಳಿತ ಮಂಡಳಿ ವಿಫಲವಾಗಿದೆ. ಇನ್ನಾದರೂ ಬೇಳೂರು, ಚೌಡ್ಲು ಹಾಗೂ ಹಾನಗಲ್ಲು ಪಂಚಾಯ್ತಿಯ ಜನ ಪ್ರತಿನಿಧಿಗಳು ಸೇರಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಒಮ್ಮತದ ತೀರ್ಮಾನ ಕೈಗೊಂಡು ಪಂಚಾಯ್ತಿಯ ಗಡಿ ವಿಸ್ತರಣೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅಭಿಪ್ರಾಯ ವ್ಯಕ್ತಗೊಂಡಿತು.
ಸುಂದರ ಹಾಗೂ ಸ್ವಚ್ಛ ನಗರ ನಿರ್ಮಾಣ ಸೇರಿದಂತೆ, ಮೂಲಭೂತ ಸೌಕರ್ಯಗಳ ಪೂರೈಕೆಗೆ ಆದ್ಯತೆ ನೀಡಬೇಕು. ಕಾಫಿ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರು ಅವರನ್ನೇ ನಂಬಿ ವ್ಯಾಪಾರ ನಡೆಸುತ್ತಿರುವ ವರ್ತಕರು ಸಂಕಷ್ಟದಲ್ಲಿದ್ದು, ಪಟ್ಟಣದ ಸುತ್ತಮುತ್ತಲಲ್ಲಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವದು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಇತರ ಸೌಲಭ್ಯ ಕಲ್ಪಿಸುವಂತೆ ಸಲಹೆ ಕೇಳಿಬಂತು.
ಪಟ್ಟಣದ ಸುತ್ತಮುತ್ತಲಲ್ಲಿ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ತೆರೆಯುವದು. ಪರ ಊರುಗಳಿಗೆ ತೆರಳಲು ಸರ್ಕಾರಿ ಬಸ್‍ಗಳ ಕೊರತೆಯಿದ್ದು, ಇಲ್ಲಿಯೇ ಒಂದು ಬಸ್ ಡಿಪೋ ತೆರೆಯುವದು. ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಟರ್ಫ್ ಕ್ರೀಡಾಂಗಣ ನಿರ್ಮಾಣವನ್ನು ತ್ವರಿತವಾಗಿ ಆರಂಭಿಸುವದು. ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸುವಂತೆ ಕ್ರೀಡಾ ವಸತಿನಿಲಯ ಸ್ಥಾಪಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಗೊಂಡವು.
ಸರ್ಕಾರಿ ಆಸ್ಪತ್ರೆ ಮೆಲ್ದರ್ಜೆಗೆ ಏರಿಸುವದರೊಂದಿಗೆ ತಜ್ಞ ವೈದ್ಯರು ಗಳನ್ನು ನೇಮಿಸಲು ಸರ್ಕಾರ ಕ್ರಮ ಕೈಗೊಂಡು ಆಸ್ಪತ್ರೆಗೆ ಮೂಲ ಸೌಲಭ್ಯ ಒದಗಿಸುವದು. ಪಟ್ಟಣದ ಮಿನಿ ವಿಧಾನ ಸೌಧ
(ಮೊದಲ ಪುಟದಿಂದ) ಕಟ್ಟಡದ ಮೇಲ್ಭಾಗದಲ್ಲಿ ಕಟ್ಟಡ ನಿರ್ಮಿಸಿ ಎಲ್ಲಾ ಸರ್ಕಾರಿ ಕಛೇರಿಗಳನ್ನೂ ಒಂದೇ ಸಂಕೀರ್ಣದಲ್ಲಿರುವಂತೆ ಯೋಜನೆ ರೂಪಿಸುವದು, ವೀರಾಜಪೇಟೆ, ಬೈಂದೂರು ರಾಜ್ಯ ಹೆದ್ದಾರಿ ವಿಸ್ತರಣೆಗೆ ಕ್ರಮ ಕೈಗೊಳ್ಳುವ ಬಗ್ಗೆ ಸಲಹೆಗಳು ಕೇಳಿಬಂತು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವಿಲೇವಾರಿಗೆ ಶಾಶ್ವತ ಪರಿಹಾರ ಯೋಜನೆ ರೂಪಿಸುವದು. ಕಿಷ್ಕಿಂಧೆಯಾಗಿರುವ ಪಟ್ಟಣದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಾಗುತ್ತಿದ್ದು, ಏಕಮುಖ ಸಂಚಾರ ಹಾಗೂ ವಾಹನ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವದು. ಪಟ್ಟಣದ ಜೆ.ಸಿ. ವೇದಿಕೆ ಮುಂಭಾಗ ನಿರ್ಮಿಸಿರುವ ಸಭಾಂಗಣಕ್ಕೆ ಬಾಗಿಲು ಅಳವಡಿಸುವದು. ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳಿಗೆ ಮಳೆಯ ನೀರು ಹೋಗಲು ಪೈಪ್‍ಲೈನ್ ಅಳವಡಿಸುವದು. ಪೋಲಿಸ್ ಠಾಣೆಯ ಮುಂಭಾಗ ದಲ್ಲಿರುವ ನಿರುಪಯುಕ್ತ ಟ್ಯಾಂಕನ್ನು ತೆರವುಗೊಳಿಸುವ ಬಗ್ಗೆ ಆಗ್ರಹಗಳು ವ್ಯಕ್ತಗೊಂಡವು.
ರಸ್ತೆಯ ಬದಿಯಲ್ಲಿ ನಿಲುಗಡೆ ಯಾಗಿರುವ ಗುಜರಿ ವಾಹನಗಳನ್ನು ತಕ್ಷಣ ತೆರವುಗೊಳಿಸಬೇಕು. ದುದ್ದುಗಲ್ಲು ಕುಡಿಯುವ ನೀರಿನ ಯೋಜನೆಯ ಟ್ರಾನ್ಸ್‍ಫಾರ್ಮರ್ ದುರಸ್ತಿ ಮಾಡಬೇಕು ಎಂದು ಒತ್ತಾಯ ಸಭೆಯಲ್ಲಿ ಕೇಳಿಬಂತು.
ಸಭೆಯ ವೇದಿಕೆಯಲ್ಲಿ ವೃತ್ತ ನಿರೀಕ್ಷಕ ನಂಜುಂಡೇಗೌಡ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ, ಸದಸ್ಯರಾದ ಲೀಲಾ ನಿರ್ವಾಣಿ, ಶೀಲಾ ಡಿಸೋಜ, ಸುಶೀಲ, ಬಿ.ಎಂ.ಸುರೇಶ್, ಮೀನಾಕುಮಾರಿ, ನಾಗರಾಜು, ಮುಖ್ಯಾಧಿಕಾರಿ ನಾಚಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾಜಿ ಸದಸ್ಯರುಗಳಾದ ನಳಿನಿ ಗಣೇಶ್, ಸುಮಾ ಸುದೀಪ್, ದಾಕ್ಷಾಯಿಣಿ, ಅಜಯ್‍ಕುಮಾರ್, ಸಂಘ ಸಂಸ್ಥೆಗಳ ಪ್ರಮುಖರಾದ ಉಷಾ ತೇಜಸ್ವಿ, ಪತ್ರಕರ್ತ ಎಸ್. ಮಹೇಶ್, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ, ಕರವೇ ನಗರಾಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ರವೀಶ್, ಅಬ್ಬಾಸ್, ಸಂತೋಷ್, ಎಂ.ಎ. ರುಬೀನಾ, ಜಯ ಕರ್ನಾಟಕ ಸಂಘಟನೆಯ ದೊರೆ, ಚಂದ್ರಶೇಖರ್, ಹರ್ಷಿತ್ ಸೇರಿದಂತೆ ಇತರರು ಭಾಗವಹಿಸಿದ್ದರು.