ಮೂರ್ನಾಡು, ಅ. 25: ಓದು-ಬರಹದೊಂದಿಗೆ ಸರ್ವಾಂಗೀಣ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಾನೋಜಿ ಹೇಳಿದರು.

ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಶಿಕ್ಷಣ ಇಲಾಖಾ ವೃತ್ತಿ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಮೂರ್ನಾಡು ವಿದ್ಯಾಸಂಸ್ಥೆ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಶೈಕ್ಷಣಿಕ ಮತ್ತು ಮಕ್ಕಳ ವೃತ್ತಿ ಶಿಕ್ಷಣದ ಕಲಿಕೋತ್ಸವ ಸಮಾರಂಭವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವೃತ್ತಿ ಶಿಕ್ಷಣದಲ್ಲಿ ಚಿತ್ರಕಲೆ, ಕಸೂತಿ ಕೆಲಸಗಳಲ್ಲಿ ತೋರುವ ಏಕಾಗ್ರತೆಯನ್ನು ಓದು ಬರಹದಲ್ಲಿ ಆಳವಡಿಸಿಕೊಳ್ಳುವಂತೆ ವೃತ್ತಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು ಎಂದರು. ಮೂರ್ನಾಡು ವಿದ್ಯಾಸಂಸ್ಥೆ ಖಜಾಂಚಿ ಪುದಿಯೊಕ್ಕಡ ಸಿ. ಸುಬ್ರಮಣಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳ ಆಸಕ್ತಿಯನ್ನು ಅರಿತು ಅವರನ್ನು ಅದೇ ವೃತ್ತಿಕಲೆಯಲ್ಲಿ ಮುಂದುವರೆ ಯುವಂತೆ ಪ್ರೇರೆಪಿಸಬೇಕು ಎಂದರು.

ಮೂರ್ನಾಡು ವಿದ್ಯಾಸಂಸ್ಥೆ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಮಾತನಾಡಿದರು.

ಕೊಡಗು ಜಿಲ್ಲಾ ಶಿಕ್ಷಣ ಇಲಾಖೆ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಜಿಮ್ಮಿ ಸಿಕ್ವೇರಾ, ಕಾರ್ಯದರ್ಶಿ ಎ.ಪಿ. ಸೋಮಯ್ಯ, ಮೂರ್ನಾಡು ಪ್ರೌಢಶಾಲೆ ವೃತ್ತಿ ಶಿಕ್ಷಕ ಹೆಚ್.ಬಿ. ಕೃಷ್ಣಪ್ಪ, ಕೂಡಿಗೆ ಡಯಟ್‍ನ ಉಪನ್ಯಾಸಕಿ ಗಾಯತ್ರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಕಾತಾಯಿನಿ, ವಿವಿಧ ಶಾಲೆಯ ವೃತ್ತಿ ಶಿಕ್ಷಕರು ಉಪಸ್ಥಿತರಿದ್ದರು.

ಈ ಸಂದರ್ಭ ಮದೆನಾಡು ಮದೆ ಮಹದೇಶ್ವರ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿರುವ ವೃತ್ತಿ ಶಿಕ್ಷಕ ಶಿವಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು.

ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ 28 ಶಾಲೆಗಳ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣಕ್ಕೆ ಸಂಬಂಧಪಟ್ಟ ವಸ್ತುಗಳ ಪ್ರದರ್ಶನ ನಡೆಸಿದರು. ಕಸೂತಿ ಕೆಲಸ, ತರಕಾರಿ, ಚಿತ್ರಕಲೆ, ಕೀಟನಾಶಕ ಔಷಧಿ ಸಸ್ಯಗಳು, ಮರಗಳಲ್ಲಿ ತಯಾರಿಸಿದ ವಸ್ತುಗಳು, ಕೃಷಿಕರ ಪರಿಕರಗಳು ಇನ್ನಿತರ ವಸ್ತುಗಳು ಗಮನ ಸೆಳೆಯಿತು.

ತೋಟಗಾರಿಕೆ ಶಿಕ್ಷಣದಲ್ಲಿ ಮೂರ್ನಾಡು ವಿದ್ಯಾಸಂಸ್ಥೆ ಪ್ರೌಢಶಾಲೆ (ಪ್ರ), ಪಾರಾಣೆ ಪ್ರೌಢಶಾಲೆ (ದ್ವಿ),ಮರಗೋಡು ಭಾರತಿ ಸಂಯುಕ್ತ ಪ್ರೌಢಶಾಲೆ (ತೃ), ಹೊಲಿಗೆ ಶಿಕ್ಷಣದಲ್ಲಿ ವೀರಾಜಪೇಟೆ ಸರ್ಕಾರಿ ಪ್ರೌಢಶಾಲೆ (ಪ್ರ), ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆ (ದ್ವಿ), ವೀರಾಜಪೇಟೆ ಜೆಪಿಎನ್ ಪ್ರೌಢಶಾಲೆ (ತೃ) ಬಹುಮಾನ ಪಡೆದುಕೊಂಡರು.