ಮಡಿಕೇರಿ, ಅ. 25 : ಎಸ್.ಎನ್.ಸಿ.ಯು ಪ್ರಗತಿ ಪರಿಶೀಲನೆ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಶಿಶು ಮರಣದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರೋಗ್ಯ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಸುಧಾರಣೆಯಾಗಿದ್ದರೂ ಸಹ ಶಿಶು ಮರಣ ಪ್ರಕರಣಗಳು ಕಡಿಮೆಯಾಗದಿರುವದು ಬೇಸರದ ವಿಷಯವಾಗಿದೆ ಮತ್ತು ಗಿರಿಜನರಲ್ಲಿ ಹೆಚ್ಚು ಶಿಶು ಮರಣ ಪ್ರಕರಣಗಳು ಕಂಡು ಬರುತ್ತಿದ್ದು, ಗಿರಿಜನರು ಇರುವ ಕಡೆ ಪ್ರತಿ ತಿಂಗಳು ಶಿಬಿರ ಏರ್ಪಡಿಸಿ ಜಾಗೃತಿ ಮೂಡಿಸಿ ಶಿಶು ಮರಣವನ್ನು ತಡೆಯುವಲ್ಲಿ ಶ್ರಮಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಅಧಿಕಾರಿಗಳಾದ ಡಾ. ನಿಲೇಶ್ ಮಾತನಾಡಿ ಗಿರಿಜನರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಕೊರತೆ ಮತ್ತು ಸಿಬ್ಬಂದಿ ಕೊರತೆ ಇದ್ದು ಐ.ಯು.ಸಿ. ಮುಖಾಂತರ ಶಿಶು ಆರೈಕೆ ಬಗ್ಗೆ ಗಿರಿಜನರಲ್ಲಿ ಹೆಚ್ಚು ಪ್ರಚಾರ ಮಾಡಿ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮವಹಿಸ ಲಾಗುವದು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಯವರು ಗಿರಿಜನರು ಹೆಚ್ಚಿರುವ ವೀರಾಜಪೇಟೆಯಲ್ಲಿ ತಾಯಿ ಮಗುವಿನ ಆರೈಕೆಗೆ ವೀರಾಜಪೇಟೆ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಶಿಶು ಮರಣ ತಪ್ಪಿಸುವಂತೆ ಸೂಚನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ. ಶಿವಕುಮಾರ್, ಡಾ.ಎನ್. ಆನಂದ್ ಹಾಗೂ ಜಿಲ್ಲೆಯ ಮೂರು ತಾಲೂಕು ಆರೋಗ್ಯಾಧಿಕಾರಿಗಳು ಇತರರು ಹಾಜರಿದ್ದರು.