*ಗೋಣಿಕೊಪ್ಪಲು, ಅ. 25: ನವೆಂಬರ್ 18, 19 ರಂದು ಪೊನ್ನಂಪೇಟೆ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಚುಟುಕು ರತ್ನ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೌರವಯುತವಾಗಿ ಆಹ್ವಾನಿಸಲಾಯಿತು.ಅವರ ಸ್ವಗೃಹ ಕಾನೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೊಕೇಶ್ ಸಾಗರ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಫಲ-ತಾಂಬೂಲ ನೀಡಿ ಸನ್ಮಾನಿಸಿ, ಸಮ್ಮೇಳನದ ಅಧ್ಯಕ್ಷತೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಸಮ್ಮೇಳಾನ ಅಧ್ಯಕ್ಷೆ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಜಿಲ್ಲಾ ಸಮ್ಮೇಳನಕ್ಕೆ ತನ್ನನ್ನು ಆಯ್ಕೆ ಮಾಡಿರುವದು ಹರ್ಷ ತಂದಿದೆ. ಪ್ರಯತ್ನ ಮೀರಿ ಈ ಸ್ಥಾನಕ್ಕೆ ಗೌರವವನ್ನು ತುಂಬುತ್ತೇನೆ. ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಹಾಗೂ ಸಾಹಿತ್ಯ ಪರವಾಗಿ ಬಿಂಬಿಸಲು ಸಹಕರಿಸುತ್ತೇನೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೊಕೇಶ್ ಸಾಗರ್ ಮಾತನಾಡಿ, ಸಮ್ಮೇಳಾನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಸುಬ್ಬಮ್ಮ ತಿಮ್ಮಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಬಾರಿ ವಿಶೇಷ ಹಾಗೂ ವಿಭಿನ್ನವಾಗಿ ಸಮ್ಮೇಳನ ಆಚರಣೆಗೆ ಚಿಂತನೆ ನಡೆಸಿದ್ದೇವೆ. ಹೆಚ್ಚಿನ ಸಾಹಿತ್ಯ ಆಸಕ್ತರು ಭಾಗವಹಿಸುವ ಮೂಲಕ ಸಮ್ಮೇಳನಕ್ಕೆ ಮತ್ತಷ್ಟು ಮೆರಗು ತುಂಬಬೇಕು. ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸಿ ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, 12ನೇ ಸಾಹಿತ್ಯ ಸಮ್ಮೇಳನ ತಾಲೂಕು ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ವಿವಿಧ ಸಾಹಿತ್ಯಪರ ಗೋಷ್ಠಿಗಳ ಮೂಲಕ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕಾರ್ಯದರ್ಶಿ ರೇಖಾ ಶ್ರೀಧರ್, ಮಾಧ್ಯಮ ಕಾರ್ಯದರ್ಶಿ ಜಗದೀಶ್ ಜೋಡುಬೀಟಿ ಸಮ್ಮೇಳನಾ ಅಧ್ಯಕ್ಷರ ಪುತ್ರ ಜೀತ್ ಪೂಣಚ್ಚ ಉಪಸ್ಥಿತರಿದ್ದರು.