ಕುಶಾಲನಗರ, ಅ. 25: ಮೂರು ದಿನಗಳ ಕಾಲ ಕೊಡಗು ಜಿಲ್ಲೆಯ ಮೂಲಕ ತೆರಳಿದ ಕಾವೇರಿ ನದಿ ಜಾಗೃತಿ ಯಾತ್ರಾ ತಂಡ ಜಿಲ್ಲೆಯ ಕಣಿವೆ ಮೂಲಕ ಸಾಗಿ ಹಾಸನ ಜಿಲ್ಲೆಯ ಕೊಣನೂರು ಕಡೆಗೆ ಸಾಗಿತು.

ಯಾತ್ರಾ ಸಂದರ್ಭ ಭಾಗಮಂಡಲ, ಬಲಮುರಿ, ವೀರಾಜಪೇಟೆ ಅರಮೇರಿ ಕಳಂಚೇರಿ ಮಠ, ನೆಲ್ಲಿಹುದಿಕೇರಿ, ಕುಶಾಲನಗರ, ಕಣಿವೆ ಮುಂತಾದ ಕಡೆಗಳಲ್ಲಿ ಸಾರ್ವಜನಿಕ ಸಭೆ ಹಾಗೂ ಕಾವೇರಿ ನದಿಗೆ ಮಹಾ ಆರತಿ ಬೆಳಗುವ ಮೂಲಕ ತಂಡ ನದಿ ಜಾಗೃತಿ ಬಗ್ಗೆ ಅರಿವು ಮೂಡಿಸಿತು. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಮತ್ತು ಕಣಿವೆ ರಾಮಲಿಂಗೇಶ್ವರ ದೇವಾಲಯ ಬಳಿ ನದಿಗೆ ಯಾತ್ರಾ ತಂಡದಿಂದ ವಿಶೇಷ ಮಹಾ ಆರತಿ ಬೆಳಗುವ ಕಾರ್ಯಕ್ರಮ ಮತ್ತು ನದಿ ಸಂರಕ್ಷಣೆ ಬಗ್ಗೆ ಜನಜಾಗೃತಿ ನಡೆಯಿತು.

ಈ ಸಂದರ್ಭ ಮಾತನಾಡಿದ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನದಿ ಪಾವಿತ್ರ್ಯತೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿರುವದು ಶ್ಲಾಘನೀಯ ವಿಚಾರ ಎಂದರು.

ಈ ಸಂದರ್ಭ ಅಖಿಲ ಭಾರತ ಸಾಧು ಸಂತರ ಸಂಘದ ಅಧ್ಯಕ್ಷÀ ಶ್ರೀ ವೇದಾನಂದ ಆನಂದ ಸ್ವಾಮೀಜಿ, ಶ್ರೀ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ, ನದಿ ಸ್ವಚ್ಚತಾ ಆಂದೋಲನ ಸಂಚಾಲಕÀ ಎಂ.ಎನ್. ಚಂದ್ರಮೋಹನ್ ಮತ್ತು ತಂಡದ ಸದಸ್ಯರುಗಳು, ದೇವಾಲಯ ಸಮಿತಿ ಪ್ರಮುಖರು ಇದ್ದರು.