ಮಡಿಕೇರಿ, ಅ.25 : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಸಂಘಟನೆ ವಿರುದ್ಧ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ತಾ.28ರಂದು ಮಂಗಳೂರಿನಿಂದ ಹಾಗೂ 29ರಂದು ಬೆಂಗಳೂರಿನಿಂದ ಮೈಸೂರಿಗೆ ಬೃಹತ್ ವಾಹನ ಜಾಥಾ ನಡೆಯಲಿದೆ ಎಂದು ವೇದಿಕೆಯ ಜಿಲ್ಲಾ ಸಹ ಸಂಚಾಲಕ ಕುಕ್ಕೇರ ಅಜಿತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.28 ರಂದು ಮಂಗಳೂರಿನಿಂದ ಹೊರಡಲಿರುವ ಯಾತ್ರೆಯು ಅಂದು ಸಂಜೆ ಮಡಿಕೇರಿಗೆ ತಲುಪಲಿದೆ. ನಗರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಬೃಹತ್ ವಾಹನ ಜಾಥಾ ನಡೆಸಲಾಗುವದಲ್ಲದೆ, ಸಂಜೆ 5 ಗಂಟೆಗೆ ಗಾಂಧಿ ಮೈದಾನದಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದರು. ಅಂದು ಕುಶಾಲನಗರದಲ್ಲಿ ತಂಗಲಿರುವ ಜಾಥಾ ಮರುದಿನ ಮೈಸೂರಿಗೆ ಪ್ರಯಾಣ ಬೆಳೆಸಲಿದೆ ಎಂದು ಹೇಳಿದರು.

ದೇಶದ ಏಕತೆ, ಅಖಂಡತೆ ಹಾಗೂ ಸಮಗ್ರತೆಗೆ ಮಾರಕವಾಗಿರುವ ಕೃತ್ಯಗಳಲ್ಲಿ ತೊಡಗಿರುವ ಸಂಘಟನೆಯೊಂದು ಕೊಡಗಿನ ಹಿಂದೂ ಸಂಘಟನೆಯ ಪ್ರಮುಖ ಕುಟ್ಟಪ್ಪ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವದು ಸಾಬೀತಾಗಿದೆ ಎಂದು ಅಜಿತ್ ಆರೋಪಿಸಿದರು.

ಈ ಬಗ್ಗೆ ರಾಜ್ಯದÀಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾ.28ರಂದು ಮಂಗಳೂರಿನಿಂದ ಹಾಗೂ ತಾ.29ರಂದು ಬೆಂಗಳೂರಿನಿಂದ ಮೈಸೂರಿಗೆ ಜನ ಜಾಗೃತಿ ಯಾತ್ರೆ ಹಾಗೂ ಬೃಹತ್ ವಾಹನ ಜಾಥಾವನ್ನು ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸ ಲಾಗಿದೆ. ಜಿಲ್ಲೆಯ ಹಿಂದೂ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಜಿತ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸೋಮವಾರಪೇಟೆ ಸಂಚಾಲಕ ದರ್ಶನ್ ಜೋಯಪ್ಪ, ಮಡಿಕೇರಿ ನಗರಾಧ್ಯಕ್ಷ ನಂದೀಶ್ ಕುಮಾರ್, ಪ್ರಮುಖರಾದ ಪಿ.ಜಿ.ಕಿಶೋರ್, ಜಿತಿನ್ ಕುಮಾರ್ ಹಾಗೂ ರವಿ ಅಪ್ಪುಕುಟ್ಟನ್ ಉಪಸ್ಥಿತರಿದ್ದರು.