ಮಡಿಕೇರಿ, ಅ. 26: ಕನ್ನಡ ರಾಜ್ಯೋತ್ಸವದೊಳಗೆ ಜಿಲ್ಲೆಯ ಎಲ್ಲಾ ವಾಣಿಜ್ಯ ಮಳಿಗೆಗಳು, ಸರಕಾರಿ ಕಚೇರಿಗಳು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿರುವ ಕೊಡಗು ಜಿಲ್ಲಾ ಯುವ ಒಕ್ಕೂಟ, ಈ ಬಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತೊಮ್ಮೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ತಿಳಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಬಿ. ಜೋಯಪ್ಪ, ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರಿಗೆ ಈ ಬಗ್ಗೆ ಒಕ್ಕೂಟದ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಕಸಾಪ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಈ ಪ್ರತಿಭಟನೆಗೆ ಯುವ ಒಕ್ಕೂಟ ಕೂಡ ಬೆಂಬಲ ಸೂಚಿಸಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ವಾಣಿಜ್ಯ ಮಳಿಗೆಗಳು, ಸರಕಾರಿ ಕಚೇರಿಗಳು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಶೇ. 50 ರಷ್ಟು ಕನ್ನಡ ಭಾಷೆಯಲ್ಲಿರುವ ನಾಮ ಫಲಕವನ್ನು ಅಳವಡಿಸಬೇಕೆಂದು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರಸಭೆ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಗಳಿಗೆ ಆದೇಶ ನೀಡಿದ್ದರೂ ಕೆಲವು ಮಂದಿ ಮಾತ್ರ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸಿದ್ದಾರೆ ಎಂದು ಜೋಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.