ಪೊನ್ನಂಪೇಟೆ, ಅ. 26: ಕೊಡವ ಮುಸ್ಲಿಂ ಅಸೋಸಿಯೇಷನ್‍ನ 40ನೇ ವರ್ಷಾಚರಣೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ತನ್ನ 39 ವರ್ಷಗಳನ್ನು ಪೂರೈಸಿ 40ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಇಂದು ವೀರಾಜಪೇಟೆಯ ಡಿ.ಹೆಚ್.ಎಸ್. ಕಟ್ಟಡದಲ್ಲಿರುವ ಸಂಸ್ಥೆಯ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ 40ನೇ ವರ್ಷಾಚರಣೆಗೆ ವಿನ್ಯಾಸಗೊಳಿಸಿದ ನೂತನ ಲಾಂಛನವನ್ನು ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳ ಮತ್ತು ಹಿರಿಯರ ಸಮ್ಮುಖದಲ್ಲಿ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಅವರು ಬಿಡುಗಡೆಗೊಳಿಸುವದರ ಮೂಲಕ ವರ್ಷಾಚರಣೆಯ ಆರಂಭೋತ್ಸವಕ್ಕೆ ಹಸಿರು ನಿಶಾನೆ ತೋರಿಸಿದರು.
40ನೇ ವರ್ಷಾಚರಣೆಯನ್ನು ಹಲವಾರು ಬಹುಪಯೋಗಿ ಕಾರ್ಯಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ಹಂತ ಹಂತವಾಗಿ ನಡೆಸಲು ನಿರ್ಧರಿ ಸಲಾಗಿದೆ. ಈ ವರ್ಷಾಚರಣೆಯ ಸ್ಮರಣಾರ್ಥ ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಯೋಜನೆಯೊಂದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಹಿಂದೆಯೂ ಸಂಸ್ಥೆ ಜನಾಂಗದ ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡುತ್ತಾ ಕಾರ್ಯನಿರ್ವಹಿಸುತ್ತಿ ರುವದನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ಮುಂದುವರಿಸಲಾಗುವದು ಎಂದು ವಿವರಣೆ ನೀಡಿದ ಡಿ.ಹೆಚ್. ಸೂಫಿ ಅವರು, ಕೆ.ಎಂ.ಎ. ಸಂಸ್ಥೆ ಉಳಿದ ಯಾವದೇ ಸಂಘಟಣೆಗಳಿಗೆ ಪ್ರತಿಸ್ಪರ್ಧಿ ಅಲ್ಲ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿದ್ದ ಕೆ.ಎಂ.ಎ ಹಿರಿಯ ನಿರ್ದೇಶಕ, ನಿವೃತ್ತ ಉಪ ತಹಶೀಲ್ದಾರ್ ಚಿಮ್ಮಿಚ್ಚಿರ ಎ. ಅಬ್ದುಲ್ಲಾ ಹಾಜಿ ಮಾತನಾಡಿ, 40 ವರ್ಷ ಸಂಘಟನೆಯೊಂದರಲ್ಲಿ ಕೆಲಸ ಮಾಡಲು ದೊರೆತ ಅವಕಾಶ ನಿಜಕ್ಕೂ ಸೌಭಾಗ್ಯವಾದದ್ದು. ಸಮಾಜದಲ್ಲಿ ಸಾಕಷ್ಟು ಸಂಘಟನೆಗಳು ಪ್ರತಿದಿನ ಹುಟ್ಟುತ್ತಿದ್ದರೂ, ಹಲವಾರು ಕಾರಣಗಳಿಂದ ಅವುಗಳು ಸರಿಯಾಗಿ ಕಾರ್ಯನಿರ್ವಹಿಸಲಾಗದೆ ಸ್ಥಗಿತಗೊಂಡ ನಿದರ್ಶನಗಳು ಕಣ್ಣಮುಂದೆ ಸಾಕಷ್ಟಿಸಿದೆ. ಹಿರಿಯರಾದ ಕುವ್ವೇಂಡ ಹಂಝತುಲ್ಲಾ ಅವರ ಸಮಾಜಮುಖಿ ಚಿಂತನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶ್ಲಾಘಿಸಿದರು.
ಕೆ.ಎಂ.ಎ.ಯ 40ನೇ ವರ್ಷಾಚರಣೆಯ ಅಂಗವಾಗಿ ಸಂಸ್ಥೆಯ ಮೂಲ ಲಾಂಛನವನ್ನು ಕೇಂದ್ರವಾಗಿಟ್ಟು ವರ್ಷಾಚರಣೆಗೆ ಸೀಮಿತವಾಗಿ ನೂತನ ಲಾಂಛನ ವೊಂದನ್ನು ಹೊರ ತರಲಾಗಿದ್ದು, ಇದನ್ನು ವೀರಾಜಪೇಟೆಯ ಚಿತ್ರ ಕಲಾವಿದ ಬಿ.ಆರ್. ಸತೀಶ್ ವಿನ್ಯಾಸಗೊಳಿಸಿದ್ದಾರೆ ಎಂದು ಕೆ.ಎಂ.ಎ. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ಎ ಮಾಜಿ ಅಧ್ಯಕ್ಷ ದುದ್ದಿಯಂಡ ಎಸ್ ಆಲಿ, ಸಂಸ್ಥೆಯ ಹಿರಿಯ ಸಲಹೆಗಾರ ಪುಡಿಯಂಡ ಎಂ. ಸಾದಲಿ ಹಾಜಿ, ಕೆ.ಎಂ.ಎ ಹಿರಿಯ ಉಪಾಧ್ಯಕ್ಷ ಆಲೀರ ಎ. ಅಹಮದ್ ಹಾಜಿ, ಕೋಶಾಧಿಕಾರಿ ಹರೀಶ್ಚಂದ್ರಂಡ ಎ. ಹಂಸ, ಜಂಟಿ ಕಾರ್ಯದರ್ಶಿ ಕರ್ತೊರೆರ ಕೆ. ಮುಸ್ತಫಾ, ಸಹಕಾರ್ಯದರ್ಶಿ ಮಂಡೇಂಡ ಎ. ಮೊಯ್ದು, ವೀರಾಜಪೇಟೆ ತಾ.ಪಂ. ಮಾಜಿ ಸದಸ್ಯ ಕುವೇಂಡ ವೈ. ಆಲಿ, ಪದಾಧಿಕಾರಿ ಗಳಾದ ಕನ್ನಡಿಯಂಡ ಎ. ಮುಸ್ತಫಾ, ಚಿಮ್ಮಿಚ್ಚಿರ ಕೆ. ಇಬ್ರಾಹಿಂ, ಪುದಿಯತಂಡ ಹೆಚ್. ಸಂಶುದ್ದೀನ್, ಮೀತಲತಂಡ ಇಸ್ಮಾಯಿಲ್, ಪೊಯಕ್ಕೇರ ಮೊಹಮ್ಮದ್ ರಫೀಕ್, ಪುಡಿಯಂಡ ಯು. ಹನೀಫ, ಪುದಿಯಾಣೆರ ಹನೀಫ, ಆಲೀರ ಕೆ.ಉಮ್ಮರ್, ಕೋಪಟ್ಟಿರ ಎಂ.ಖಾದರ್, ಕಿಕ್ಕರೆ ಎಸ್. ಮೊಹಮ್ಮದ್, ಎಮ್ಮೆಮಾಡಿನ ಚೆಕ್ಕೆರ ಅಹಮದ್ ಮುಸ್ಲಿಯಾರ್ ಸೇರಿದಂತೆ ನೂರಾರು ಸದಸ್ಯರು ಪಾಲ್ಗೊಂಡಿದ್ದರು.
ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಧಾರ್ಮಿಕ ಪಂಡಿತ ಆಲಿ ಮುಸ್ಲಿಯಾರ್ ನೇತೃತ್ವ ನೀಡಿದರು. ಹಿರಿಯ ಉಪಾಧ್ಯಕ್ಷ ಆಲೀರ ಎ. ಅಹಮದ್ ಹಾಜಿ ವಂದಿಸಿದರು.