ಕೂಡಿಗೆ, ಅ. 26: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದಲ್ಲಿ ರುವ ಆದಿವಾಸಿಗಳ ಕೇಂದ್ರದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಮಗುವೊಂದು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಪುಟ್ಟ ಮತ್ತು ಗಂಗೆ ಎಂಬವರ ಮೂರುವರೆ ವರ್ಷದ ಮಗು ಲಕ್ಷ್ಮಿ ಸಾವನ್ನಪ್ಪಿರುವ ದುರ್ದೈವಿ. ಮಗುವಿನ ತಂದೆ ತಾಯಿ ಕೂಲಿ ಕಾರ್ಮಿಕರಾಗಿದ್ದು, ಬೆಳಗ್ಗಿನಿಂದ ಮಗು ಅತಿಯಾಗಿ ಒದ್ದಾಡುತ್ತಿದ್ದದನ್ನು ಗಮನಿಸಿದ ಪೋಷಕರು ಕೆಲಗಂಟೆಗಳ ನಂತರ ಬಂದ ತುರ್ತು ಚಿಕಿತ್ಸಾ ವಾಹನದಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸದರಾದರೂ ಪ್ರಯೋಜನ ವಾಗಲಿಲ್ಲ.

ಸ್ಥಳೀಯರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗೆ ತಿಳಿಸಲು ಪ್ರಯತ್ನಿಸಿದರೂ ದೂರವಾಣಿ ಸಂಪರ್ಕಕ್ಕೆ ದೊರಕುತ್ತಿರಲಿಲ್ಲ. ಕೆಲ ಕಾಲದ ನಂತರ ದೂರವಾಣಿ ಕರೆಗೆ ಸಂಪರ್ಕಿಸಿದ ಅಧಿಕಾರಿ ತುರ್ತು ಚಿಕಿತ್ಸಾ ವಾಹನದ ಬಾಡಿಗೆ ನೀಡುವವರು ಯಾರು ಎಂದು ಹೇಳುತ್ತಾ ಕಾಲಾಹರಣ ಮಾಡಿದ ಪರಿಣಾಮ ಮಗು ಅಸುನೀಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಸ್ಥಳಕ್ಕೆ ಕರ್ನಾಟಕ ರಾಜ್ಯ ಆದಿವಾಸಿ ಬುಡಕಟ್ಟು ಜನಾಂಗದ ಸಂಚಾಲಕ ಎಸ್.ಎನ್.ರಾಜಾರಾವ್, ಬಸವನಹಳ್ಳಿ ಸಹಕಾರ ಸಂಘದ ನಿರ್ದೇಶಕ ಮೋಹನ್ ಸೇರಿದಂತೆ ಗ್ರಾಮಸ್ಥರು ಆಗಮಿಸಿ ಸಾಂತ್ವನ ಹೇಳಿದರು.