ಮಡಿಕೇರಿ, ಅ. 26: ಯುವತಿ ಯೊಬ್ಬಳ ಅಪಹರಣ ಶಂಕೆಯೊಂದಿಗೆ, ಅಮಾಯಕ ಯುವಕರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದಲ್ಲದೆ ಕೊಲೆ ಯತ್ನ ಮತ್ತು ಬಲವಂತವಾಗಿ ವಾಹನದಲ್ಲಿ ಎಳೆದೊಯ್ದ ಅಪರಾಧಕ್ಕಾಗಿ ಓರ್ವ ಮಹಿಳೆ ಸಹಿತ ಏಳು ಮಂದಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸೋಮವಾರಪೇಟೆಯ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಸಿಟಿ ಫರ್ನಿಚರ್ ಅಂಗಡಿಯ ಹೆಚ್.ಎನ್. ಕಾರ್ತಿಕ್ ಈ ಹಿಂದೆ ಬೆಂಗಳೂರಿನ ಯುರೇಕಾ ಸರ್ವಿಸಸ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕನಕಪುರ ತಾಲೂಕಿನ ಎ.ಎನ್. ಶ್ರೀನಿವಾಸ್ ಪತ್ನಿ ರತ್ನಮ್ಮ ಎಂಬವರ ಮಗಳು ಪುಣ್ಯವತಿಯು ಅದೇ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಆನಂತರದಲ್ಲಿ ಪುಣ್ಯವತಿಯು ಬೆಂಗಳೂರಿನಿಂದ ಕಾಣೆಯಾಗಿದ್ದು, ಅವಳನ್ನು ಹೆಚ್.ಎನ್. ಕಾರ್ತಿಕ್ ಕರೆದುಕೊಂಡು ಬಂದಿರುತ್ತಾರೆಂದು ಊಹಿಸಿ ಆರೋಪಿ ಮಾದಯ್ಯ ಎಂಬವರ ಮಗ ಎಂ. ರಾಜು, ಸಿದ್ದಯ್ಯನವರ ಮಗ ಎಸ್. ದೇವರಾಜು, ಶಿವಯ್ಯನವರ ಮಗ ಎಸ್. ಗೋವಿಂದ್, ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ಚಂದ್ರೇಗೌಡರವರ ಮಗ ಎನ್.ಸಿ. ಶೇಖರ್, ಕತ್ರಿಗುಪ್ಪೆಯ ಕುಮಾರಸ್ವಾಮಿ ಲೇಔಟ್‍ನ ನಿವಾಸಿ ಚಿನ್ನಪ್ಪನವರ ಮಗ ಸಿ. ಮಾರ್ಟಿನ್, ಮಾಗಡಿ ರಸ್ತೆ, ಬ್ಯಾಡರಹಳ್ಳಿಯ ನಿವಾಸಿ ವೆಂಕಪ್ಪನವರ ಮಗ ವಿ. ಜಯರಾಮ್ ಹಾಗೂ 7ನೇ ಆರೋಪಿ ರತ್ನಮ್ಮ ಸೇರಿಕೊಂಡು ಬೆಂಗಳೂರಿನಿಂದ ಕ್ವಾಲಿಸ್ ವಾಹನವನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿನ ಯೂನಿಕ್ ಸೆಕ್ಯೂರಿಟಿಯಲ್ಲಿ ಏರಿಯಾ ಮ್ಯಾನೇಜರ್ ಆಗಿದ್ದ ಕಾರ್ತಿಕ್ ಸ್ನೇಹಿತ ಟಿ.ಜೆ. ಮಹೇಶ್ ಎಂಬವರನ್ನು ಬೆಂಗಳೂರಿನಿಂದ ಅಪಹರಿಸಿದ್ದರು.

ತಾ. 24.3.2010 ರಂದು ಸೋಮವಾರಪೇಟೆ ಹೆಚ್.ಎನ್. ಕಾರ್ತಿಕ್ ಅಂಗಡಿಗೆ ಬಂದು ಅವರೊಂದಿಗೆ ಪುಣ್ಯವತಿ ಎಲ್ಲಿದ್ದಾಳೆಂದು ಕೇಳಿ ಕಾರ್ತಿಕ್‍ನನ್ನು ಬಲಾತ್ಕಾರವಾಗಿ ಹಿಡಿದು ತಾವು ಬಂದಿದ್ದ ಕ್ವಾಲಿಸ್ ವಾಹನಕ್ಕೆ ಎತ್ತಿ ಹಾಕಿಕೊಂಡು ಕುಶಲನಗರದ ಕಡೆಗೆ ಹೋಗಿದ್ದಾರೆ. ಆಗ ಎಲ್ಲಾ ಆರೋಪಿಗಳು ಅವಾಚ್ಯ ಶಬ್ಧಗಳಿಂದ ಬೈದು, ಅವರಿಗೆ ಹಿಗ್ಗಾಮುಗ್ಗ ಹೊಡೆದು, ಪುಣ್ಯವತಿ ಎಲ್ಲಿದ್ದಾಳೆಂದು ತಿಳಿಸದಿದ್ದರೆ ಕೊಲೆ ಮಾಡುವದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಇದನ್ನು ತಡೆಯಲು ಹೋದ ಟಿ.ಜೆ. ಮಹೇಶ್‍ಗೂ ಕೂಡ ಹೊಡೆದಿರುತ್ತಾರೆ. ಈ ಬಗ್ಗೆ ಸೋಮವಾರಪೇಟೆ ಠಾಣಾ ಪೊಲೀಸರು ಪ್ರಕರಣವನ್ನು ನೋಂದಾಯಿಸಿಕೊಂಡು ಆರೋಪಿತರ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ಆರೋಪಿಗಳ ಕೃತ್ಯ ನಿಸ್ಸಂಶಯವಾಗಿ ಸಾಬೀತಾಗಿದೆ. ಆ ಮೇರೆಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ. ಪವನೇಶ್ ತೀರ್ಪು ನೀಡಿರುತ್ತಾರೆ. ಸದರಿ ತೀರ್ಪಿನ ಮೇರೆಗೆ ಆರೋಪಿಗಳು ಅಕ್ರಮ ಕೂಟದೊಂದಿಗೆ ಕೃತ್ಯ ಎಸಗಿದ ಅಪರಾಧಕ್ಕಾಗಿ 1 ವರ್ಷದ ಕಠಿಣ ಸಜೆ ಮತ್ತು ತಲಾ ರೂ. 2 ಸಾವಿರ ದಂಡವನ್ನು ಮತ್ತು ಜೀವ ಬೆದರಿಕೆ ಒಡ್ಡಿದ ಅಪರಾಧಕ್ಕಾಗಿ 3 ವರ್ಷಗಳ ಕಠಿಣ ಸಜೆ ಹಾಗೂ ತಲಾ ರೂ. 2 ಸಾವಿರ ದಂಡವನ್ನು ವಿಧಿಸಲಾಗಿದೆ.

ವಸೂಲಾತಿಯಾಗುವ ದಂಡದ ಹಣದಲ್ಲಿ ರೂ. 12,500 ಮೊತ್ತವನ್ನು ಗಾಯಾಳುಗಳಾದ ಕಾರ್ತಿಕ್ ಮತ್ತು ಮಹೇಶ್ ಇವರುಗಳಿಗೆ ಸಮಾನಾಗಿ ಪರಿಹಾರವಾಗಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ವಿಚಾರಣೆ ವಾದವನ್ನು ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ನಡೆಸಿರುತ್ತಾರೆ.