ವೀರಾಜಪೇಟೆ, ಅ. 26: ಅಂತರರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯಾದ ಲಯನ್ಸ್ ಇಂದು ಸಮಾಜಕ್ಕೆ ಒಳಿತಾಗುವಂತಹ ಸೇವೆಗಳನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಸಲ್ಲಿಸುತ್ತಿದೆ. ಸಂಸ್ಥೆ ತನ್ನ ಕಾರ್ಯ ವೈಖರಿಯನ್ನು ವಿಸ್ತರಿಸಲು ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಲಯನ್ಸ್ ಗವರ್ನರ್ ಲ. ಹೆಚ್.ಆರ್. ಹರೀಶ್ ತಿಳಿಸಿದರು. ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಮ್ಮತ್ತಿಯಲ್ಲಿ ಹೊಸದಾಗಿ ಲಯನ್ಸ್ ಕ್ಲಬ್‍ನ ಸ್ಥಾಪನೆಯ ಪ್ರಯುಕ್ತ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಹರೀಶ್ ಅವರು ಸಮಾಜ ಸೇವಾ ಸಂಸ್ಥೆಗಳು ಬೆಳವಣಿಗೆ, ಏಳಿಗೆಯನ್ನು ಕಾಣಬೇಕಾದರೆ ಸದಸ್ಯರುಗಳಿಂದ ಸಂಸ್ಥೆಗೆ ಅವಿರತವಾಗಿ ಸೇವೆ ಅಗತ್ಯ. ಸಂಸ್ಥೆಯ ಸದಸ್ಯರುಗಳು ಪರಸ್ಪರ ಒಮ್ಮತದಿಂದ ಸೇವೆ ಸಲ್ಲಿಸಬೇಕು ಎಂದು ಹರೀಶ್ ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಗರ್ವನರ್ ಸಿ.ಎ. ಮುತ್ತಣ್ಣ ಅವರು 24 ಮಂದಿ ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು. ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೋಮೆಯಂಡ ಎಸ್. ದಾದು ಪೂಣಚ್ಚ, ಕಾರ್ಯದರ್ಶಿಯಾಗಿ ಎಂ. ಪ್ರಸಾದ್ ಚಂಗಪ್ಪ, ಖಜಾಂಚಿ ಯಾಗಿ ಎಂ.ಬಿ. ಅಯ್ಯಪ್ಪ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷತೆ ವಹಿಸಿದ್ದ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಡಿ. ಪೂಣಚ್ಚ ಮಾತನಾಡಿ, ಲಯನ್ಸ್ ಸಂಸ್ಥೆಯು ಸಮಾಜ ಸೇವೆಯಲ್ಲಿ ಪ್ರಗತಿಯನ್ನು ಸಾಧಿಸಲಿ ಎಂದು ಹೇಳಿದರು. ಅಮ್ಮತ್ತಿ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಪೂಣಚ್ಚ ಮಾತನಾಡಿ ಸಂಸ್ಥೆಯ ನಿಯಮ ನಿಬಂಧನೆ ಗೊಳಪಟ್ಟು ಮುಕ್ತವಾಗಿ ಸಮಾಜ ಸೇವೆಗೆ ನಮ್ಮ ಸೇವೆ ಮೀಸಲು ಎಂದರು. ವೇದಿಕೆಯಲ್ಲಿ ನಮಿತಾ ಹರೀಶ್. ಗೋಣಿಕೊಪ್ಪ ಕ್ಲಬ್‍ನ ಪ್ರಣೀತ್ ಪೂಣಚ್ಚ, ಖಜಾಂಚಿ ಡಾ. ಎ. ಪೂಣಚ್ಚ, ಎಂ.ಎಂ. ಗಣಪತಿ ಮತ್ತಿತರರು ಉಪಸ್ಥಿತರಿದ್ದರು.