ಮಡಿಕೇರಿ, ಅ. 26: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ 1984 ರಿಂದ ಏಲಕ್ಕಿ ವ್ಯವಹಾರವು ಸ್ಥಗಿತಗೊಂಡಿದ್ದು, ಕೃಷಿ ಪರಿಕರ ಮಾರಾಟ, ಹತ್ಯಾರು ಸಾಮಗ್ರಿ, ಹೆಂಚು, ಗೊಬ್ಬರ ಇತ್ಯಾದಿ ಮಾರಾಟ ನಡೆಯುತ್ತಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘವು ಮೂರು ದಶಕಗಳ ಹಿಂದೆ ತನ್ನ ವಹಿವಾಟುವಿನಿಂದ ಮೋಸಗೊಂಡು ಇಂದಿಗೂ ದೃಢತೆ ಕಾಯ್ದುಕೊಳ್ಳುವದು ಸಾಧ್ಯವಾಗಿಲ್ಲ ಎಂದು ತಾ. 24ರ ‘ಶಕ್ತಿ’ಯಲ್ಲಿ ‘ಮೋಸದ ಬಲೆಯೊಳಗೆ ಸಿಲುಕಿರುವ ಸಹಕಾರ ಸಂಘಗಳು’ ಈ ಶೀರ್ಷಿಕೆಯಲ್ಲಿ ಪ್ರಕಣೆಗೊಂಡಿದೆ. ಆದರೆ, ಈ ಸಂಘವು ಕಳೆದ ಮೂರು ದಶಕಗಳ ಹಿಂದೆ ಅಂದರೆ 1984ರಲ್ಲಿ ಏಲಕ್ಕಿಯ ಬೆಲೆಯು ಕೆಜಿಗೆ ರೂ. 700 ರಿಂದ ಒಮ್ಮೆಗೆ ರೂ. 200ಕ್ಕೆ ದರ ಕುಸಿತವಾದುದರಿಂದ ಹಾಗೂ ಏಲಕ್ಕಿ ಗಿಡಗಳಿಗೆ ಕಟ್ಟೆರೋಗ ಕಾಣಿಸಿಕೊಂಡಿದ್ದು, ಸಂಘದಲ್ಲಿ ಏಲಕ್ಕಿ ವ್ಯವಹಾರವು ಕುಂಠಿತಗೊಂಡಿದೆ. ನಂತರದ ಅವಧಿಯಲ್ಲಿ ಕೊಡಗಿನಲ್ಲಿ ಶೇ. 90 ರಷ್ಟು ಏಲಕ್ಕಿ ಬೆಳೆಗಾರರು ಏಲಕ್ಕಿ ಬೆಳೆ ಬಿಟ್ಟು ಕಾಫಿ ಬೆಳೆಯ ಮೇಲೆ ಅವಲಂಬಿತರಾಗಿರುವದರಿಂದ ಕೊಡಗಿನಲ್ಲಿ ಏಲಕ್ಕಿ ಬೆಳೆಯು ಶೇ. 90 ರಷ್ಟು ನಾಶವಾಗಿರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಏಲಕ್ಕಿಗೆ ಈಗ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಇರುವದರಿಂದ ಏಲಕ್ಕಿ ವ್ಯವಹಾರವು ಸಂಘದಲ್ಲಿ ಸ್ಥಗಿತಗೊಂಡಿರುತ್ತದೆ. ಸಂಘವು ಮಡಿಕೇರಿಯ ಮುಖ್ಯ ಕಚೇರಿ ಯೊಂದಿಗೆ ಸೋಮವಾರಪೇಟೆಯಲ್ಲಿ ಶಾಖೆಯನ್ನು ತೆರೆದು ಕಾರ್ಯನಿರ್ವಹಿಸುತ್ತಿದ್ದು, ಸಂಘದಲ್ಲಿ ಕೃಷಿ ಪರಿಕರ ಮಾರಾಟ, ಹತ್ಯಾರು ಸಾಮಗ್ರಿಗಳು, ಹೆಂಚು, ಗೊಬ್ಬರ, ಕ್ರಿಮಿನಾಶಕ, ಮದ್ದುಗುಂಡು ಮಾರಾಟ ವ್ಯವಹಾರಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಏಲಕ್ಕಿ ವ್ಯವಹಾರ ಸ್ಥಗಿತಗೊಂಡರೂ, ವ್ಯಾಪಾರ ವಹಿವಾಟಿನಿಂದಾಗಿ 2010ರಿಂದ ಸತತವಾಗಿ ಸಂಘವು ರೂ. 8 ಲಕ್ಷದಿಂದ ರೂ. 10 ಲಕ್ಷದವರೆಗೂ ನಿವ್ವಳ ಲಾಭಗಳಿಸುತ್ತಾ, ಪಿಗ್ಮಿ ವ್ಯವಹಾರವನ್ನು ಸಹ ಕೈಗೊಂಡಿದ್ದು, ಪ್ರಗತಿಯಲ್ಲಿ ಸಾಗುತ್ತಿದೆ ಹಾಗೂ ಸಂಘವು ಸದಸ್ಯರುಗಳಿಗೆ ಶೇ. 15 ರಿಂದ 20 ರಷ್ಟು ಡಿವಿಡೆಂಡನ್ನು ಪಾವತಿಸಿದ್ದು, ಇಂದಿಗೂ ಸಹ ತನ್ನ ದೃಢತೆಯನ್ನು ಕಾಯ್ದುಕೊಂಡು ಮುನ್ನಡೆಯುತ್ತಿದೆ ಎಂದು ಲಿಖಿತವಾಗಿ ತಿಳಿಸಿದ್ದಾರೆ.