ಸೋಮವಾರಪೇಟೆ, ಅ.26: ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರದಲ್ಲಿ ಕೇವಲ 30 ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದ ಹಿನ್ನೆಲೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆಯ ವಿರುದ್ಧ ತಮ್ಮ ಭಾಷಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

9 ರಿಂದ 16ರ ವಯೋಮಾನ ದೊಳಗಿನ ವಿದ್ಯಾರ್ಥಿಗಳಿಗೆ ಕಲಾಶ್ರೀ ಆಯ್ಕೆ ಶಿಬಿರ ಆಯೋಜಿಸಲಾಗಿದ್ದು ತಾಲೂಕಿನಲ್ಲಿ 150ಕ್ಕೂ ಅಧಿಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಒಂದು ಶಾಲೆಯಿಂದ ಕನಿಷ್ಟ ನಾಲ್ವರು ವಿದ್ಯಾರ್ಥಿಗಳು ಬಂದರೂ ಸಹ 500ಕ್ಕೂ ಅಧಿಕ ಮಕ್ಕಳ ಪ್ರತಿಭೆ ಗುರುತಿಸಲು ಸಹಕಾರಿಯಾಗುತ್ತಿದೆ. ಆದರೆ ಇಲಾಖಾಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹಲವಷ್ಟು ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅಸಮಾಧಾನ ಹೊರಹಾಕಿದರು. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿಗೊಳಿಸುವದು ಮಾತ್ರ ಶಿಕ್ಷಣವಲ್ಲ. ಪ್ರತಿ ಮಗುವಿನ ಸರ್ವತೋಮುಖ ವಿಕಾಸವೇ ಶಿಕ್ಷಣವಾಗಿದ್ದು, ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರದಲ್ಲೂ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.

ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯತ್ತ ಗಮನ ಹರಿಸಬೇಕು. ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಸ್ಪರ್ಧಾ ಮನೋಭಾವ ಮುಖ್ಯ ಎಂದು ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಅಭಿಮನ್ಯುಕುಮಾರ್ ಅವರು ಹುರಿದುಂಬಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಅವರೂ ತಮ್ಮ ಭಾಷಣದಲ್ಲಿ ಸ್ಪರ್ಧಿಗಳ ಸಂಖ್ಯೆ ಇಳಿಮುಖವಾಗಿರುವ ಬಗ್ಗೆ ಬೊಟ್ಟು ಮಾಡಿದರು. ಇಲಾಖಾ ಕಾರ್ಯಕ್ರಮಗಳು ಕಾಟಾಚಾರದ ಕಾರ್ಯಕ್ರಮವಾಗಬಾರದು. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ತಾ.ಪಂ. ಸದಸ್ಯೆ ತಂಗಮ್ಮ ಮಾತನಾಡಿ, ಕಾರ್ಯಕ್ರಮವನ್ನು ಆಯೋಜಿಸುವ ಇಲಾಖೆಗೆ ಗ್ರಹಣ ಬಡಿದಿದೆ. ಇದನ್ನು ತೊಡೆದುಹಾಕುವ ಮೂಲಕ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಬೇಕು ಎಂದರು. ಬಾಲಭವನ ಸಮಿತಿ ಸದಸ್ಯೆ ಸುಮಾ ಸುದೀಪ್ ಮಾತನಾಡಿದರು. ಪ್ರಬಾರ ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಮಹೇಶ್ ಮಾತನಾಡಿ, ಕಲಾಶ್ರೀ ಶಿಬಿರದ ಬಗ್ಗೆ ಮಾಹಿತಿ ಒದಗಿಸಿದರು.

ಸಾಂದೀಪನಿ ಶಾಲೆಯ ತಾನ್ಯ ಪ್ರಾರ್ಥಿಸಿ, ಶಿಶು ಅಭಿವೃದ್ಧಿ ಯೋಜ ನಾಧಿಕಾರಿಗಳ ಕಚೇರಿಯ ಶೀಲಾ ಕಾರ್ಯಕ್ರಮ ನಿರ್ವಹಿಸಿದರು. ಯಶೋದ ವಂದಿಸಿದರು.

ಶಿಬಿರದಲ್ಲಿ ಸೃಜನಾತ್ಮಕ ಕಲೆ (ಚಿತ್ರ ಕಲೆ, ಕರಕುಶಲ, ಜೇಡಿ ಮಣ್ಣಿನ ಕಲೆ) ಸೃಜನಾತ್ಮಕ ಬರವಣಿಗೆ (ಕಥೆ, ಕವನ, ಪ್ರಬಂಧ) ಸೃಜನಾತ್ಮಕ ಪ್ರದರ್ಶನ ಕಲೆ (ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ನೃತ್ಯ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ ಇತ್ಯಾದಿ) ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ, ವಿವರಣೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಪರ್ಧೆಗಳು ನಡೆದವು.