ಬಾಳುಗೋಡು, ಅ. 26: ಕೊಡವ ಸಮಾಜ ಒಕ್ಕೂಟದಿಂದ ಮೂರು ದಿನಗಳ ಕಾಲ ನಡೆಯುವ 6 ನೇ ವರ್ಷದ ಕೊಡವ ನಮ್ಮೆಗೆ ಬಾಳುಗೋಡುವಿನಲ್ಲಿರುವ ಕೊಡವ ಸಮಾಜ ಒಕ್ಕೂಟದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಅಲ್ಲಿನ ಬಾಡೆಯಲ್ಲಿ ದೇವಿಗೆ ದೀಪವನ್ನಿಟ್ಟು ಪೂಜಿಸಲಾಯಿತು.ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ದೀಪ ಬೆಳಗಿಸುವ ಮೂಲಕ 6 ನೇ ವರ್ಷದ ಕೊಡವ ನಮ್ಮೆಯ ಉದ್ಘಾಟನೆ ನೆರವೇರಿಸಿದರು. ಕೊಡವತಿಯರು ಕೊಡವ ಸೀರೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷತೆ ಮೂಡಿಸಿದರು. ಮಹಿಳೆಯರು ವಸ್ತು ಪ್ರದರ್ಶನ ಮತ್ತು ಮಾರಾಟದಲ್ಲಿ ಪಾಲ್ಗೊಂಡು ಉದ್ಘಾಟನೆ ದಿನದ ಪೊಮ್ಮಕ್ಕಡ ನಮ್ಮೆಗೆ ಮೆರಗು ನೀಡಿದರು. ತಿಂಡಿ ತಿನಿಸುಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು.
ವೀಣಾ ಅಚ್ಚಯ್ಯ ಮಾತನಾಡಿ, ಕೊಡವರಿಗೆ ಎಲ್ಲೆಲ್ಲಿಯೂ ಹೆಚ್ಚಿನ ಗೌರವ ಲಭಿಸುತ್ತಿದೆ. ಇದನ್ನು ಅರಿತುಕೊಂಡು ಮುನ್ನಡೆಯಬೇಕಿದೆ. ಜಿಲ್ಲೆಯಲ್ಲಿ ಸಾಹಿತಿಗಳ ಸಂಖ್ಯೆ ಹೆಚ್ಚಿದ್ದರೂ ಯುವಪೀಳಿಗೆಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.
ಕಾವೇರಿಯನ್ನು ಕಣಿಪೂಜೆ ಮೂಲಕ ಪೂಜಿಸುವ ಪದ್ಧತಿ ಮಹಿಳೆಯರಿಂದಲೇ ಪೋಷಣೆಯಲ್ಲಿದೆ. ಮಹಿಳೆಯರು ಇದನ್ನು ಮಕ್ಕಳಿಗೆ ಕಲಿಸುವ ಕೆಲಸವನ್ನು ಮಾಡಬೇಕಿದೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು.
ಕೊಡವ ಸಮಾಜ ಒಕ್ಕೂಟದ ಮೈದಾನ ರಸ್ತೆಗೆ ಕೊಡಗಿಗೆ ನೀಡಿರುವ ವಿಶೇಷ ಪ್ಯಾಕೇಜ್‍ನಲ್ಲಿ ಅನುದಾನವಿರುವದರಿಂದ ಅದು ಅನುಷ್ಠಾನಗೊಳ್ಳಲಿದೆ. ಈ ಬಗ್ಗೆ ಮುತುವರ್ಜಿ ವಹಿಸಿದ್ದೇವೆ ಎಂದರು.
ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ರಾಜ್ಯ ಸರ್ಕಾರದಿಂದ ಇಲ್ಲಿನ ರಸ್ತೆ ಅಭಿವೃದ್ಧಿಗೆ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಶಾಸಕಿ ವೀಣಾ ಅಚ್ಚಯ್ಯ ಅವರ ಮುತುವರ್ಜಿಯಲ್ಲಿ ಕಾಮಗಾರಿ ಅನುಷ್ಠಾನಗೊಳ್ಳುವ
(ಮೊದಲ ಪುಟದಿಂದ) ವಿಶ್ವಾಸವಿದೆ ಎಂದರು. ಈ ಸಂದರ್ಭ ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಕೊಡವ ಸಮಾಜ ಒಕ್ಕೂಟ ಕಾರ್ಯದರ್ಶಿ ವಾಟೇರೀರ ಶಂಕರಿ ಪೂವಯ್ಯ ಉಪಸ್ಥಿತರಿದ್ದರು. ಗೌರಮ್ಮ ವಂದಿಸಿದರು. ಕಾಳಿಮಾಡ ಮೋಟಯ್ಯ ಕಾರ್ಯಕ್ರಮ ನಿರೂಪಿಸಿದರು.
ಕೃತಿ ಬಿಡುಗಡೆ: ಕೊಡವ ಮಕ್ಕಡ ಕೂಟದಿಂದ ಹೊರತಂದಿರುವ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಬರೆದ ‘ಕೊಡವರು ಹಾಗೂ ಕಾವೇರಿ’ ಎಂಬ ಕೃತಿಯನ್ನು ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಮಂಡೇಯಡ ರವಿ ಉತ್ತಪ್ಪ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಸಾಹಿತಿ ರಮೇಶ್ ಉತ್ತಪ್ಪ, ಕೊಡಗಿನಲ್ಲಿ ಓದುವ ಹವ್ಯಾಸ ಮಹಿಳೆಯರಿಗೆ ಹೆಚ್ಚಿದೆ. ಕೊಡವರು ಹಾಗೂ ಕಾವೇರಿ ನಡುವಿನ ಸಂಬಂಧವನ್ನು ಕೃತಿಯಲ್ಲಿ ತೋರಿಸಲಾಗಿದೆ. ಮಹಿಳೆಯರು ಅರ್ಥೈಸಿಕೊಂಡು ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಪೊಮ್ಮಕ್ಕಡ ನಮ್ಮೆ: ಈ ಸಂದರ್ಭ ನಡೆದ ಪೊಮ್ಮಕ್ಕಡ ನಮ್ಮೆಯಲ್ಲಿ ಮಹಿಳೆಯರು ದೈನಂದಿನ ಬಳಕೆಗೆ ಬಳಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಪಾಲ್ಗೊಂಡರು. ತಿಂಡಿ, ತಿನಿಸು, ಕೊಡಗಿನ ಭಕ್ಷ್ಯ, ಐಸ್‍ಕ್ರೀಂ, ಕೇಕ್, ಖಾದ್ಯಗಳ ಮಾರಾಟ ನಡೆಯಿತು. 20 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಬಟ್ಟೆ, ಮನೆಗೆ ಬಳಸುವ ವಸ್ತುಗಳು ಮಾರಾಟವಾದವು.