ಮಡಿಕೇರಿ, ಅ. 26: ಕ್ಷಯರೋಗ ನಿಯಂತ್ರಿಸುವ ಎಫ್.ಡಿ.ಸಿ. ಡೈಲಿ ರೆಜಿಮನ್ ಮಾತ್ರೆ ವಿತರಣೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಚಾಲನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ, ಸರಕಾರದ ಎಲ್ಲಾ ಸವಲತ್ತುಗಳನ್ನು ಉಪಯೋಗಿಸಿ ಕೊಳ್ಳಬೇಕು ಹಾಗೂ ಕ್ಷಯರೋಗಿಯು ಪ್ರತೀ ದಿನ ಮಾತ್ರೆ ತೆಗೆದುಕೊಂಡು ಕ್ಷಯರೋಗ ನಿಯಂತ್ರಣಕ್ಕೆ ತರಬೇಕು ಮತ್ತು ಈ ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಿಸಲು ಹೆಚ್ಚು ಕಾರ್ಯೋ ನ್ಮುಖವಾಗಿ ಕೆಲಸ ನಿರ್ವಹಿಸಬೇಕು ಮತ್ತು ಕ್ಷಯ ರೋಗವನ್ನು ನಿಯಂತ್ರಣಕ್ಕೆ ತರಲು ನವೆಂಬರ್ ತಿಂಗಳಲ್ಲಿ ಶಿಬಿರ ನಡೆಸಿ ರೋಗಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಪ್ರಕರಣ ಕಡಿಮೆ ಮಾಡುವಂತೆ ಅಗತ್ಯ ಮಾಹಿತಿ ನೀಡುವಂತೆ ಸಲಹೆ ಮಾಡಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಎ.ಸಿ. ಶಿವಕುಮಾರ್ ಮಾತನಾಡಿ, ಕ್ಷಯ ರೋಗ ನಿಯಂತ್ರಣಕ್ಕೆ ಈ ಹಿಂದೆ ಡಾಟ್ಸ್ ಮೂಲಕ ವಾರದಲ್ಲಿ ಮೂರು ದಿನ ಮಾತ್ರೆಗಳನ್ನು ಕೊಡಲಾಗುತ್ತಿದ್ದು, ದಿನವೊಂದಕ್ಕೆ 7 ಮಾತ್ರೆಗಳನ್ನು ಸೇವಿಸಬೇಕಿತ್ತು ಎಂದು ತಿಳಿಸಿದರು.
ಈಗ 4 ಔಷಧಿಗಳಿಂದ ಒಂದು ಗುಳಿಗೆಯನ್ನು ತಯಾರಿಸಿದ್ದು ರೋಗಿಗಳಿಗೆ ಹೆಚ್ಚು ಅನುಕೂಲ ವಾಗಲಿದೆ ಎಂದು ತಿಳಿಸಿದರು. 7 ಮಾತ್ರೆಗಳ ಬದಲಾಗಿ 2 ರಿಂದ 5 ಮಾತ್ರೆಗಳನ್ನು ಕ್ಷಯರೋಗಿಯ ದೇಹದ ತೂಕದ ಆಧಾರದ ಮೇಲೆ ನೀಡಲಾಗುತ್ತದೆ. ಈ ಮಾತ್ರೆಗಳಿಂದ ಯಾವದೇ ಅಡ್ಡ ಪರಿಣಾಮ ಗಳಿರುವದಿಲ್ಲ. ಕ್ಷಯ ರೋಗವನ್ನು ಶೀಘ್ರವೇ ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾ ಕೇಂದ್ರದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಎಂ. ಮಹದೇವಪ್ಪ, ಉಮೇಶ್ ಮತ್ತು ವಿನಿಲ್ ಇವರುಗಳು ಈ ಕಾರ್ಯಕ್ರಮದ ಚಾಲನೆ ನೀಡಲು ಕ್ಷಯ ರೋಗಿಗಳನ್ನು ಕರೆ ತಂದಿದ್ದರು.