ಸುಂಟಿಕೊಪ್ಪ, ಅ. 26: ಮಂಗಳೂರಿನಿಂದ ಜಿಲ್ಲೆಯ ಮೂಲಕ ಬೇರೆ ಬೇರೆ ಉದ್ದಿಮೆಗಳಿಗೆ ನಿಯಮ ಉಲ್ಲಂಘಿಸಿ ಕಲ್ಲಿದ್ದಿಲು ಸಾಗಿಸುತ್ತಿದ್ದ 9 ಲಾರಿಗಳನ್ನು ವಶಕ್ಕೆ ಪಡೆದಿರುವ ಸುಂಟಿಕೊಪ್ಪ ಪೊಲೀಸರು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ಇಲ್ಲಿ ಪೊಲೀಸ್ ಠಾಣಾಧಿಕಾರಿ ಜಯರಾಮ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆಯೊಂದಿಗೆ ಈ ಮಾರ್ಗದಲ್ಲಿ ಲಾರಿಗಳ ಸಾಂದ್ರತೆಗಿಂತಲೂ ಅಧಿಕ ಪ್ರಮಾಣದ ಕಲ್ಲಿದ್ದಿಲು ತುಂಬಿಸಿಕೊಂಡು ಸರಕಾರಕ್ಕೆ ತೆರಿಗೆ ವಂಚಿಸಲು ಯತ್ನಿಸಿದ ಹಗರಣವನ್ನು ಬಯಲಿಗೆಳೆಯಲಾಗಿದೆ.

ಸುಂಟಿಕೊಪ್ಪ ಪೊಲೀಸರು ಹೆದ್ದಾರಿಯಲ್ಲಿ ತೆರಳುತ್ತಿದ್ದ ಲಾರಿಗಳನ್ನು ಪರಿಶೀಲನೆಗೊಳಪಡಿಸಿದಾಗ ಲಾರಿಯ ಸಾಂದ್ರತೆ ಪರವಾನಗಿ ಉಲ್ಲಂಘಿಸಿ ಅಧಿಕ ಕಲ್ಲಿದ್ದಿಲು ತುಂಬಿರುವದು ಖಾತರಿಯಾಗಿದೆ. ಆ ಮೇರೆಗೆ 9 ಲಾರಿಗಳನ್ನು ಕಲ್ಲಿದ್ದಿಲು ಸಹಿತ ಮುಟ್ಟುಗೋಲು ಹಾಕಿಕೊಂಡಿರುವ ಠಾಣಾಧಿಕಾರಿ ಜಯರಾಂ ಮತ್ತು ಸಿಬ್ಬಂದಿ ಸಾರಿಗೆ ಪ್ರಾಧಿಕಾರಕ್ಕೆ ಒಪ್ಪಿಸಿದ್ದಾರೆ.

ರಾಜ್ಯ ಸಾರಿಗೆ ಪ್ರಾಧಿಕಾರ ಅಧಿಕಾರಿಗಳು ಲಾರಿಗಳ ಸಾಂದ್ರತೆ ಅಧಿಕ ತುಂಬಲಾಗಿದ್ದ ಕಲ್ಲಿದ್ದಿಲು ಬಾಪ್ತ್ತು ರೂ. ಒಂದು ಲಕ್ಷದ ಎಂಬತ್ತಾರು ಸಾವಿರದ ನೂರ ಐವತ್ತು ದಂಡ ವಿಧಿಸಿ ಲಾರಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ಒಂಬತ್ತು ಲಾರಿಗಳ ಪೈಕಿ ಒಂದು ಲಾರಿಗೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕಾರಣ ಪೊಲೀಸ್ ವಶದಲ್ಲಿ ಇರಿಸಲಾಗಿದೆ.

ಕುಶಾಲನಗರ ಸೇರಿದಂತೆ ರಾಜ್ಯದ ಬೇರೆ ಬೇರೆ ಉದ್ದಿಮೆಗಳೀಗೆ ಈ ಕಲ್ಲಿದ್ದಿಲು ಸಾಗಾಟಗೊಳ್ಳುತ್ತಿದ್ದು, ಸುಂಟಿಕೊಪ್ಪದ ವ್ಯಕ್ತಿಯೊಬ್ಬರಿಗೆ ಸೇರಿದ ಲಾರಿ ಕೂಡ ಇದ್ದುದ್ದಾಗಿ ಠಾಣಾಧಿಕಾರಿ ಜಯರಾಂ ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.

ಸುಂಟಿಕೊಪ್ಪ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ನಿರಂತರವಾಗಿ ಕಲ್ಲಿದ್ದಿಲನ್ನು ಲಾರಿಯ ಸಾಮಥ್ರ್ಯಕ್ಕಿಂತ ಅಧಿಕವಾಗಿ ತುಂಬಿಸಿಕೊಂಡು ವೇಗವಾಗಿ ಲಾರಿಯನ್ನು ಚಾಲಿಸಿಕೊಂಡು ತೆರಳುತ್ತಿದ್ದ ಚಾಲಕರಿಗೆ ಠಾಣಾಧಿಕಾರಿ ದಂಡ ವಿಧಿಸಿದ್ದು, ವಿವರ ಕೆಳಗಿನಂತಿದೆ.

ಲಾರಿ (ಕೆಎ42ಎ7278) ರೂ. 13,600 ದಂಡÀ, ಲಾರಿ (ಕೆಎ21-ಬಿ-1423)ಗೆ ರೂ. 27,250, (ಕೆಎ 42ಎ6003) ರೂ. 30,500, ಲಾರಿ (ಕೆಎ 12 ಬಿಹೆಚ್ 4019) ರೂ. 31,800 ದಂಡ, ಲಾರಿ (ಕೆಎ 06 ಸಿ 8429) ರೂ. 36,000, (ಕೆಎ 12 ಬಿ.0185) ರೂ. 19,000, (ಕೆಎ 52- 8633 ) ರೂ. 13,250 ಹಾಗೂ (ಕೆಎ 12 ಎ-2645) ರೂ. 14,750 ದಂಡ ವಿಧಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

- ವರದಿ : ರಾಜುರೈ.