ಬೆಂಗಳೂರು, ಅ. 26: ಕೊಡಗಿನ ವ್ಯಕ್ತಿ ಡಿವೈಎಸ್ಪಿ ಎಂ.ಕೆ. ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆ ತನಿಖೆಯ ಪ್ರಥಮ ಹೆಜ್ಜೆ ಇರಿಸಿದೆ ಈ ಸಂಬಂಧ ಬೆಂಗಳೂರು ನಗರ ಯೋಜನಾ ಮತ್ತು ಅಭಿವೃದ್ಧಿ ಖಾತೆ ಸಚಿವ ಕೆ.ಜೆ. ಜಾರ್ಜ್ ಅವರನ್ನು ಪ್ರಥಮ ಆರೋಪಿಯಾಗಿಸಿ ಸಿಬಿಐ ಮೊಕದ್ದಮೆ ದಾಖಲಿಸಿದೆ.
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಪ್ರಣವ್ ಮೋಹಂತಿ ಅವರನ್ನು ಮೊಕದ್ದಮೆಯಲ್ಲಿ 2ನೇ ಆರೋಪಿಯಾಗಿಸಿದೆ. ಪ್ರಸಕ್ತ ಇವರು ಲೋಕಾಯುಕ್ತ ಐಜಿಪಿಯಾಗಿದ್ದಾರೆ. ಮೂರನೇ ಆರೋಪಿಯಾಗಿ ರಾಜ್ಯ ಗುಪ್ತಚರ ವಿಭಾಗದ ಐಡಿಜಿಪಿ ಎ.ಎಂ. ಪ್ರಸಾದ್ ಅವರನ್ನು ಪರಿಗಣಿಸಲಾಗಿದೆ.
ಮೃತ ಗಣಪತಿ ಅವರ ತಂದೆ ಎಂ.ಕೆ. ಕುಶಾಲಪ್ಪ ಹಾಗೂ ಸಹೋದರ ಮಾಚಯ್ಯ ಅವರು ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅನ್ವಯ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿತ್ತು. ರಾಜ್ಯ ಸರಕಾರ ಈ ಹಿಂದೆ ಸಿಐಡಿ ಮೂಲಕ ತನಿಖೆಗೆ ಒಳಪಡಿಸಿತ್ತು. ಸಿಐಡಿ ಅಧಿಕಾರಿಗಳು ತನಿಖೆ ಬಳಿಕ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ದೋಷ ಮುಕ್ತಗೊಳಿಸಿದ್ದರು. ಇದರ ವಿರುದ್ಧ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.