ಕೂಡಿಗೆ, ಅ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಈಗಾಗಲೇ ದಿಡ್ಡಳ್ಳಿ ನಿರಾಶ್ರಿತರಿಗೆ ನಿವೇಶನಗಳನ್ನು ನೀಡಲಾಗಿದ್ದು, ಇದೇ ಜಾಗದ ಸರ್ವೆ ನಂ 1/1 ರಲ್ಲಿ 2 ಎಕರೆ ಜಾಗವನ್ನು ಕಾದಿರಿಸಲಾಗಿದೆ. ಈ ಸ್ಥಳಕ್ಕೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಸಚಿವ ಕಾಗೋಡು ತಿಮ್ಮಪ್ಪನವರು ಭೇಟಿ ನೀಡಿದ ಸಂದರ್ಭ ದಾಖಲಾತಿಗಳನ್ನು ಸರಿಪಡಿಸಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಇದೀಗ ಬ್ಯಾಡಗೊಟ್ಟ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಹೆಸರಿಗೆ 1 ಎಕರೆ ಜಾಗ ಮಾತ್ರ ಖಾತೆಯಾಗಿರುತ್ತದೆ. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಗ್ರಾಮಗಳಲ್ಲಿ 300 ಕ್ಕೂ ಹೆಚ್ಚು ನಿವೇಶನ ರಹಿತರು ಇದ್ದು, ಇವರುಗಳು ಈಗಾಗಲೇ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರುಗಳಿಗೆ ಮೊದಲು ಆದ್ಯತೆ ನೀಡುವಂತೆ ಈ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಮತ್ತು ಗ್ರಾಮಸಭೆಗಳಲ್ಲಿ ಬಂದ ಅರ್ಜಿಗಳನ್ನು ಪರಿಶೀಲಿಸಿದ ನಂತರ 100 ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಸದಸ್ಯರುಗಳ ಒಕ್ಕೊರಲಿನ ತೀರ್ಮಾನದಂತೆ ಈ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೂ ಹಾಗೂ ಜಿಲ್ಲಾಧಿಕಾರಿಯವರಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅಧಿಕಾರಿಗಳು ತಕ್ಷಣಸ ಸ್ಪಂದಿಸಿ ನಿವೇಶನ ನೀಡಲು ಮುಂದಾಗಬೇಕಿದೆ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಬ್ಯಾಡಗೊಟ್ಟದಲ್ಲಿ ನಿವೇಶನ ನೀಡುವ ಬದಲು ಇನ್ನೂ ಹೆಚ್ಚುವರಿಯಾಗಿ ದಿಡ್ಡಳ್ಳಿ ನಿರಾಶ್ರಿತರ ಕೇಂದ್ರದಲ್ಲಿ ಸೇರ್ಪಡೆಗೊಳಿಸುವಲ್ಲಿ ಅಧಿಕಾರಿಗಳು ಮುಂದಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲ, ಉಪಾಧ್ಯಕ್ಷ ಗಿರೀಶ್ ಕುಮಾರ್ ಆರೋಪಿಸಿದ್ದಾರೆ.
ಈಗಾಗಲೇ ಆಯ್ಕೆಗೊಂಡಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಲು ಆಗಬೇಕಾಗುವ ವ್ಯವಸ್ಥೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಸರಿಪಡಿಸಿ ನಿವೇಶನ ರಹಿತರಿಗೆ ನಿವೇಶನ ನೀಡಲು ಹಕ್ಕುಪತ್ರ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಸರಿಪಡಿಸಲು ಸಹಕರಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ.
ಬ್ಯಾಡಗೊಟ್ಟ ಗ್ರಾಮದಲ್ಲಿ ಈಗ ಗುರುತಿಸಿರುವ ಒಂದು ಎಕರೆ ಜಾಗವು ಬೆಟ್ಟದಿಂದ ಕೂಡಿದ್ದು, ಈ ಜಾಗವನ್ನು ಸಮತಟ್ಟು ಮಾಡಿ, ರಸ್ತೆ ನಿರ್ಮಾಣ ಮಾಡುವದು ಕಷ್ಟದ ಕೆಲಸವಾಗಿದೆ. ಗ್ರಾ.ಪಂ.ನ ಅನುದಾನವನ್ನು ಬಳಸಲು ಸಾಧ್ಯವಾಗುವದಿಲ್ಲ. ಬದಲಿಗೆ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ಸಮೀಪದವಿರುವ ಜಾಗವು ಸಮತಟ್ಟಾಗಿದ್ದು, ಈ ಜಾಗವನ್ನು ಗ್ರಾಮ ಪಂಚಾಯಿತಿಗೆ ಜಿಲ್ಲಾಧಿಕಾರಿ ಯವರು ವರ್ಗಾಯಿಸಿ ಸ್ಥಳೀಯರಿಗೆ ನಿವೇಶನ ನೀಡಲು ಅನುವು ಮಾಡಿಕೊಡಬೇಕೆಂದು ನಿವೇಶನ ರಹಿತರ ಆಗ್ರಹವಾಗಿದೆ.
- ಕೆ.ಕೆ.ನಾಗರಾಜಶೆಟ್ಟಿ