ಬಾಳುಗೋಡು, ಅ. 27: ಇಲ್ಲಿನ ಕೊಡವ ಸಮಾಜ ಒಕ್ಕೂಟದ ಮೈದಾನದಲ್ಲಿ ಕೊಡವ ಸಮಾಜ ಒಕ್ಕೂಟದಿಂದ ನಡೆದ ಅಂತರ ಕೊಡವ ಸಮಾಜ ಹಾಕಿ ಪಂದ್ಯಾಟದಲ್ಲಿ ಬೆಂಗಳೂರು ಹಾಗೂ ವೀರಾಜಪೇಟೆ ಕೊಡವ ಸಮಾಜ ತಂಡಗಳು ಫೈನಲ್‍ಗೆ ಪ್ರವೇಶ ಪಡೆದಿವೆ. ಉತ್ತಮ ಪೈಪೋಟಿ ನೀಡಿದ ಮೂರ್ನಾಡು ಹಾಗೂ ಮೈಸೂರು ತಂಡಗಳು ಸೋಲನುಭವಿಸಿ ಪಂದ್ಯಾವಳಿಯಿಂದ ಹೊರ ಬಿದ್ದಿವೆ.
ಇಂದು ನಡೆದ ಮೊದಲ ಸೆಮಿ ಫೈನಲ್‍ನಲ್ಲಿ ಬೆಂಗಳೂರು ಕೊಡವ ಸಮಾಜ ಹಾಗೂ ಮೂರ್ನಾಡು ಕೊಡವ ಸಮಾಜ ತಂಡಗಳ ನಡುವಿನ ಪಂದ್ಯದಲ್ಲಿ ಟೈಬ್ರೇಕರ್‍ನಲ್ಲಿ ಶೂಟೌಟ್ ಮೂಲಕ ಫಲಿತಾಂಶ ಹೊರ ಬಂತು. ಬೆಂಗಳೂರು ತಂಡವು 4-1 ಗೋಲುಗಳ ಮೂಲಕ ಗೆಲುವು ಪಡೆಯಿತು. ಪಂದ್ಯದ ಪೂರ್ಣ ಅವಧಿಯಲ್ಲಿ ಉಭಯ ತಂಡಗಳು ಗೋಲು ದಾಖಲಿಸಲಾಗದೆ ಶೂಟೌಟ್ ಅವಕಾಶ ನೀಡಲಾಯಿತು. ಶೂಟೌಟ್‍ನಲ್ಲಿ ಬೆಂಗಳೂರು ಪರ ಮೋಕ್ಷಿತ್ ಉತ್ತಪ್ಪ, ನಾಚಪ್ಪ, ಸೆಲ್ಸಿ ಮೇದಪ್ಪ, ದಿಲನ್ ದೇವಯ್ಯ, ಮೂರ್ನಾಡು ಪರ ಮುಕೇಶ್ ಮೊಣ್ಣಯ್ಯ ಹಾಗೂ ಬೋಪಣ್ಣ ಗೋಲು ಹೊಡೆದರು.
2ನೇ ಸೆಮಿಫೈನಲ್‍ನಲ್ಲಿ ವೀರಾಜಪೇಟೆ ಕೊಡವ ಸಮಾಜವು ಮೈಸೂರು ಕೊಡವ ಸಮಾಜ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ವೀರಾಜಪೇಟೆ ಪರ ಕರಿನೆರವಂಡ ಕುಂಞಪ್ಪ 2 ಗೋಲು ಹೊಡೆದರು. ಮೈಸೂರು ಪರ ಯಶ್ವಿನ್ ಗಣಪತಿ 1 ಗೋಲು ಹೊಡೆದರು.
ಮಾಳೇಟೀರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು. ಪಂದ್ಯಾವಳಿ ನಿರ್ದೇಶಕ ಕಾಟುಮಣಿಯಂಡ ಉಮೇಶ್, ತಾಂತ್ರಿಕ ವರ್ಗದಲ್ಲಿ ಚೋಯಮಾಡಂಡ ಚೆಂಗಪ್ಪ, ನೆಲ್ಲಮಕ್ಕಡ ಪವನ್, ಕೋಡಿಮಣಿಯಂಡ ಗಣಪತಿ, ಕಾಟುಮಣಿಯಂಡ ಕಾರ್ತಿಕ್, ಸುಳ್ಳಿಮಾಡ ಸುಬ್ಬಯ್ಯ ನಿರ್ವಹಿಸಿದರು.
ಕೊಡವ ಸಮಾಜ ತಂಡಗಳ ನಡುವೆ ನಡೆಯಬೇಕಿದ್ದ ಹಗ್ಗಜಗ್ಗಾಟವನ್ನು ಮಳೆಯ ಕಾರಣಕ್ಕೆ ಶನಿವಾರಕ್ಕೆ ಮುಂದೂಡಲಾಯಿತು.
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮಡಿಕೇರಿ ಕೊಡವ ಸಮಾಜದ ಮಂಡುವಂಡ ಅಜಿತ್ ಪ್ರಥಮ, ನಾಪೋಕ್ಲು ಕೊಡವ ಸಮಾಜದ ಚಿಯಕ್‍ಪೂವಂಡ ಚೇತನ್ ದ್ವಿತೀಯ, ನಾಪೋಕ್ಲು ಕೊಡವ ಸಮಾಜದ ಮಾಳೆಯಂಡ ವಿನು ತೃತೀಯ ಬಹುಮಾನ ಪಡೆದುಕೊಂಡರು.